ʼಎಲ್‍ಇಡಿ ಬೀದಿ ದೀಪ ಯೋಜನೆʼ ಕುಂಟುತ್ತಾ ಸಾಗಲು ಕಾರಣವೇನು?: ಅಧಿಕಾರಿಗಳಿಗೆ ಸಚಿವ ಕೃಷ್ಣಬೈರೇಗೌಡ ತರಾಟೆ

ಬೆಂಗಳೂರು : ನಗರದ ಎಲ್‍ಇಡಿ ಬೀದಿದೀಪಗಳನ್ನು ಅಳವಡಿಸುವ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಶೇ.61.01ರಷ್ಟು ವಿದ್ಯುತ್ ಉಳಿತಾಯ ಮಾಡಬಹುದು. ಆದರೆ, ಈ ಯೋಜನೆ ಕುಂಟುತ್ತಾ ಸಾಗಲು ಕಾರಣವೇನು? ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಮಂಗಳವಾರ ನಗರದಲ್ಲಿ ಎಲ್‍ಇಡಿ ಬೀದಿ ದೀಪಗಳನ್ನು ಅಳವಡಿಸುವ ಕುರಿತು ಜಿಬಿಎ ಎಲೆಕ್ಟ್ರಿಕ್ ಎಂಜಿನಿಯರ್‍ಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್‍ಇಡಿ ಬಲ್ಬ್ ಗಳನ್ನು ಅಳವಡಿಸುವ ಕುರಿತು 2025 ಮೇ 7 ಮತ್ತು 15 ರಂದು ಕಾರ್ಯಾದೇಶ ನೀಡಲಾಗಿದೆ. ಯೋಜನೆಯಂತೆ ನಗರದಾದ್ಯಂತ ಒಟ್ಟು 3,02,919 ಎಲ್‍ಇಡಿ ದೀಪಗಳನ್ನು ಅಳವಡಿಸಬೇಕಿತ್ತು ಎಂದರು.
ಆದರೆ, ಪ್ರಸ್ತುತ 2,67,270 ದೀಪಗಳನ್ನು ಮಾತ್ರ ಅಳವಡಿಸಲಾಗಿದೆ. ಅಲ್ಲದೆ, ಒಟ್ಟು 24,677 ಸಿಸಿಎಂಎಸ್ ಪ್ಯಾನಲ್‍ಗಳನ್ನು ಅಳವಡಿಸಬೇಕಿತ್ತು, ಆದರೆ ಪ್ರಸ್ತುತ 7,567 ಪ್ಯಾನಲ್‍ಗಳನ್ನು ಮಾತ್ರ ಅಳವಡಿಸಲಾಗಿರುವುದು ಏಕೆ? ಬಾಕಿ ಕೆಲಸ ಕುಂಟುತ್ತಾ ಸಾಗಲು ಕಾರಣವೇನು? ಎಂದು ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು.
ಎರಡು ತಿಂಗಳ ಕಾಲಾವಕಾಶ: ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲವೆಂಬ ನಿರಂತರ ದೂರುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮತ್ತು ವಿದ್ಯುತ್ ಉಳಿಸುವ ಇಂಧನ ದಕ್ಷತೆಯ ಯೋಜನೆಯ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಅಧಿಕಾರಿಗಳು ಸೂಕ್ತ ಸಮಯಕ್ಕೆ ಯೋಜನೆಯನ್ನು ಪೂರ್ಣಗೊಳಿಸದೆ ಬೋಗಸ್ ಅಂಕಿಅಂಶಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಸಭೆಯಲ್ಲಿ ಹೇಳಿದ ಅವರು, ಬಾಕಿ ಉಳಿದಿರುವ ಎಲ್ಲಾ ಎಲ್‍ಇಡಿ ದೀಪಗಳು ಮತ್ತು ಸಿಸಿಎಂಎಸ್ ಪ್ಯಾನಲ್‍ಗಳನ್ನು ಅಳವಡಿಸಲು ಆಗಸ್ಟ್ 3 ರಿಂದ ಜಾರಿಗೆ ಬರುವಂತೆ ಹೆಚ್ಚುವರಿ 2 ತಿಂಗಳ ಕಾಲಾವಕಾಶ ನೀಡುವುದಾಗಿ ತಿಳಿಸಿದರು.
ಪ್ರಸ್ತುತ ಇರುವ ಎಲ್ಲ ಸಾಂಪ್ರದಾಯಿಕ ಬೀದಿ ದೀಪಗಳನ್ನು ತೆಗೆದು, ಅವುಗಳ ಜಾಗದಲ್ಲಿ ಇಂಧನ ದಕ್ಷತೆಯುಳ್ಳ ಎಲ್‍ಇಡಿ ದೀಪಗಳನ್ನು ಕಡ್ಡಾಯವಾಗಿ ಅಳವಡಿಸಬೇಕು, ದೀಪಗಳೇ ಇಲ್ಲದ ಆಯ್ದ ಪ್ರದೇಶಗಳಲ್ಲಿ ಹೆಚ್ಚುವರಿ ಬೀದಿ ದೀಪಗಳನ್ನು ಅಳವಡಿಸಬೇಕು, ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಟೋಮೇಷನ್ ವ್ಯವಸ್ಥೆಯಾದ ಸಿಸಿಎಂಎಸ್ ಅಳವಡಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಕಟ್ಟುನಿಟ್ಟಿನ ಸೂಚನೆ ನೀಡಿದರು.
‘ಸಹಾಯ’ ಪೋರ್ಟಲ್‍ನಲ್ಲಿ ಸ್ವೀಕೃತವಾಗುವ ದೂರುಗಳ ಪೈಕಿ ಶೇ.34ರಷ್ಟು ಕಾರ್ಯನಿರ್ವಹಿಸದ ಬೀದಿ ದೀಪಗಳ ಕುರಿತ ದೂರುಗಳು ದಾಖಲಾಗುತ್ತಿವೆ. ತಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕರು ನೀಡಿದ ದೂರುಗಳನ್ನು 48 ಗಂಟೆಗಳ ಒಳಗಾಗಿ ಪರಿಹರಿಸಬೇಕು. ಒಂದು ವೇಳೆ ಗುತ್ತಿಗೆದಾರರು ಈ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಬೀದಿ ದೀಪಗಳನ್ನು ಸುಸ್ಥಿತಿಯಲ್ಲಿಡಲು ವಿಫಲರಾದ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು. ದೀಪಗಳ ಸಂಖ್ಯೆ ಮತ್ತು ವಿಳಂಬವಾದ ದಿನಗಳ ಆಧಾರದ ಮೇಲೆ ದಂಡದ ಮೊತ್ತವನ್ನು ಲೆಕ್ಕಹಾಕಬೇಕು. ಅಲ್ಲದೆ, ಸರಿಯಾಗಿ ಸ್ಪಂದಿಸದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಗಳನ್ನೂ ತೆಗೆದುಕೊಳ್ಳಬೇಕು ಎಂದು ಕೃಷ್ಣ ಬೈರೇಗೌಡ ಸಭೆಯಲ್ಲಿ ಸೂಚಿಸಿದರು.
ನಿಮ್ಮದೆ ಇಲಾಖೆಗೆ ಕಾರ್ಯ ಪ್ರಗತಿಯ ಬಗ್ಗೆ ಪ್ರಾಥಮಿಕ ಅಂಕಿಅಂಶಗಳೂ ಇಲ್ಲದೆ ಸಭೆಗೆ ಏಕೆ ಬರ್ತೀರಿ, ಸಂಬಂಧಿತ ಸಚಿವರು ಸಭೆ ಕರೆದಿದ್ದಾರೆ ಎಂದ ಮೇಲೆ ಕನಿಷ್ಠ ಸಿದ್ದತೆಯೂ ಇಲ್ಲದೆ ಬರುವುದು ಎಷ್ಟು ಸರಿ? ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳ ವಿರುದ್ಧ ಮಾತಿನ ಚಾಟಿ ಬೀಸಿದರು.
ಡೇಟಾ ಇಲ್ಲದೆ ಬಂದ ಅಧಿಕಾರಿಗಳಿಗೆ ಕ್ಲಾಸ್: ಪ್ರಸ್ತುತ ನಗರದ ಐದೂ ಪಾಲಿಕೆಗಳಲ್ಲಿ ಬೀದಿ ದೀಪಗಳಿಗೆ ವಿದ್ಯುತ್ ಬಿಲ್ ಎಷ್ಟು ಪಾವತಿಸಲಾಗುತ್ತಿದೆ. ಎಲ್‍ಇಡಿ ದೀಪ ಅಳವಡಿಸಿದ ನಂತರದ ವ್ಯತ್ಯಾಸ ಎಷ್ಟು ಎಂಬ ಅಂಕಿಅಂಶ ನೀಡುವಂತೆ ಸಚಿವ ಕೃಷ್ಣ ಬೈರೇಗೌಡರು ಸಭೆಯಲ್ಲಿ ಅಧಿಕಾರಿಗಳಿಗೆ ಕೋರಿದರು. ಆದರೆ, ಅಧಿಕಾರಿಗಳ ಬಳಿ ಯಾವುದೇ ಅಧಿಕೃತ ಅಂಕಿಅಂಶ ಇರಲಿಲ್ಲ. ಈ ವೇಳೆ ಅಸಮಾಧಾನ ಹೊರಹಾಕಿದ ಸಚಿವರು, ಬೇಸಿಕ್ ಡೇಟಾ ಇಲ್ಲ, ಪ್ರಶ್ನೆಗೆ ಉತ್ತರ ಇಲ್ಲ, ಸಭೆ ಕರೆದರೆ ಕನಿಷ್ಠ ಸಿದ್ದತೆಯೂ ಇಲ್ಲದೆ ಮತ್ಯಾಕೆ ನನ್ನ ಮುಖ ನೋಡಿಕೊಂಡು ಹೋಗಲು ಬಂದಿದ್ದಾ? ಸರಕಾರಿ ನೌಕರಿ ಅಂದ್ರೆ ಕೈಬೀಸ್ಕಂಡು ಬರ್ಬೋದು ಹೋಗ್ಬೋದು ಎಂಬ ಧೋರಣೆ ಬೆಳೆದುಬಿಟ್ಟಿದೆ. ಅಧಿಕಾರಿಗಳ ಇಂತಹ ವರ್ತನೆಯಿಂದ ಸರಕಾರಕ್ಕೆ ಕೆಟ್ಟ ಹೆಸರು ಎಂದು ಕೃಷ್ಣ ಬೈರೇಗೌಡ ತೀವ್ರ ತರಾಟೆಗೆ ತೆಗೆದುಕೊಂಡರು.






