ನ.7ರಿಂದ ಎರಡನೇ ಹಂತದ 'ವಾರ್ಡ್ ಒನ್' ಅಭಿಯಾನಕ್ಕೆ ಚಾಲನೆ : ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ‘ವಾರ್ಡ್ ಒನ್’ ಅಭಿಯಾನವು ಮೊದಲ ಹಂತದಲ್ಲಿ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರಕಿದ್ದು, ನವೆಂಬರ್ 7ರಿಂದ 50ಕ್ಕೂ ಹೆಚ್ಚು ವಾರ್ಡ್‍ಗಳಲ್ಲಿ ಎರಡನೇ ಹಂತದ ಅಭಿಯಾನ ಆರಂಭಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ‘ವಾರ್ಡ್ ಒನ್’ ಅಭಿಯಾನದ ಮುಂದಿನ ಹಂತಕ್ಕೆ ಸಂಬಂಧಿಸಿದಂತೆ ಬುಧವಾರ ಸಂಜೆ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆತುರಪಟ್ಟು ಅಭಿಯಾನವನ್ನು ಮುಗಿಸುವುದಕ್ಕಿಂತ ಸಾರ್ವಜನಿಕರಿಗೆ ತಲುಪುವ ಕೆಲಸ ಅತ್ಯಂತ ಗುಣಮಟ್ಟದಿಂದ ಕೂಡಿರಬೇಕು ಎಂದು ಪ್ರತಿಪಾದಿಸಿದರು.
ಕೆಲವೊಂದು ವಾರ್ಡ್‍ಗಳಲ್ಲಿ ವಿಸ್ತೃ ತವಾಗಿ ಪರಿಶೀಲನೆ ನಡೆಸಿ ಕೆಲಸ ಪೂರ್ಣಗೊಳಿಸಲು ಹೆಚ್ಚಿನ ಸಮಯ ತಗುಲುತ್ತಿದೆ. ಈ ಹಿನ್ನೆಲೆಯಲ್ಲಿ, ಕೇವಲ ಗುರಿ ತಲುಪುವ ಆತುರದಲ್ಲಿ ಅಭಿಯಾನದ ಗುಣಮಟ್ಟವನ್ನು ಕಡಿಮೆ ಮಾಡಿಕೊಳ್ಳುವುದು ಸೂಕ್ತವಲ್ಲ. ಹೀಗಾಗಿ ಜಿಬಿಎ ನಾಗರಿಕರಿಗೆ ಸಮಗ್ರ ಹಾಗೂ ಸುಸ್ಥಿರ ಫಲಿತಾಂಶ ನೀಡುವ ಉದ್ದೇಶದಿಂದ ಈ ಪ್ರಚಾರ ಮತ್ತು ಆಂದೋಲನವನ್ನು ಡಿಸೆಂಬರ್ ಮಧ್ಯದವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಸಂಖ್ಯೆಗಿಂತ ಕೆಲಸದ ಅಚ್ಚುಕಟ್ಟುತನ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವುದು ನಮ್ಮ ಆದ್ಯತೆಯಾಗಬೇಕು ಎಂದು ಸಚಿವರು ತಿಳಿಸಿದರು.
ವಾರ್ಡ್ ಒನ್ ಅಭಿಯಾನದ ಮೊದಲ ಹಂತದಲ್ಲಿ ಉತ್ತಮ ಕೆಲಸವಾಗಿದೆ. ಈ ಹಂತದಲ್ಲಿ 43 ವಾರ್ಡ್‍ಗಳನ್ನು ಆಯ್ಕೆ ಮಾಡಿ, ಆಯ್ದ ವಾರ್ಡ್‍ಗಳ ಮಿತಿಯಲ್ಲಿ 357.41 ಕಿ.ಮೀ. ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ 704 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ರಸ್ತೆ ಬದಿಯಲ್ಲಿ ಕಸ ಎಸೆಯಲಾಗುತ್ತಿದ್ದ 342 ಬ್ಲಾಕ್ ಸ್ಪಾಟ್ ಗಳಿಂದ ಸುಮಾರು 426 ಟನ್ ಕಸವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ. 820 ಸ್ಥಳಗಳಲ್ಲಿ 1,141 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಅಲ್ಲದೆ, 29.68 ಕಿ.ಮೀ. ಫುಟ್‍ಪಾತ್ ರಿಪೇರಿ ಮಾಡಲಾಗಿದ್ದು, 455.15 ಕಿ.ಮೀ. ಫುಟ್‍ಪಾತ್ ಒತ್ತುವರಿಯನ್ನೂ ತೆರವುಗೊಳಿಸಲಾಗಿದೆ. ಐದೂ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆದಿರುವ ಈ ಕೆಲಸಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕೃಷ್ಣ ಬೈರೇಗೌಡ ಪ್ರಶಂಸಿಸಿದರು.
ಮೊದಲ ಹಂತದ ಅಭಿಯಾನ ಬೆನ್ನಿಗೆ ಇದೀಗ ಎರಡನೇ ಹಂತದಲ್ಲಿ ಮತ್ತಷ್ಟು ವಾರ್ಡ್‍ಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಈ ಹಂತದಲ್ಲಿ ನಿಗದಿಪಡಿಸಿದ ವಾರ್ಡ್‍ಗಳನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಂಡು ಕ್ಷೇತ್ರ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಬೇಕು. ವಾರ್ಡ್ ಮಟ್ಟದ ಈ ಅಭಿಯಾನದಲ್ಲಿ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ವಿವಿಧ ನಾಗರಿಕ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಸ್ಥಳೀಯ ಸಂಘ-ಸಂಸ್ಥೆಗಳನ್ನು ಜೊತೆಗೂಡಿಸಿಕೊಂಡು ಕೆಲಸ ಮಾಡುವುದರಿಂದ ವಾರ್ಡ್‍ಗಳಲ್ಲಿರುವ ನೈಜ ನಾಗರಿಕ ಸಮಸ್ಯೆಗಳ ಬಗ್ಗೆ ಜಿಬಿಎಗೆ ಹೆಚ್ಚಿನ ತಿಳುವಳಿಕೆ ಸಿಗಲಿದ್ದು, ಜನರಿಗೆ ಹೆಚ್ಚು ಸಮಗ್ರವಾದ ಪರಿಹಾರ ಹಾಗೂ ಉತ್ತಮ ಫಲಿತಾಂಶ ನೀಡಲು ನೆರವಾಗುತ್ತದೆ. ಆದ್ದರಿಂದ ವಾರ್ಡ್‍ಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವಾಗ ಆಯಾ ಭಾಗದ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅವರನ್ನು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಶ್ರಮಿಸಬೇಕು ಎಂದು ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಇಲಾಖೆಗಳ ನಡುವಿನ ಸಮನ್ವಯತೆಯ ವಿಚಾರದಲ್ಲಿ ಸಚಿವರು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದರು. ಪ್ರಸ್ತುತ ಕ್ಷೇತ್ರ ಮಟ್ಟದಲ್ಲಿ ವಿವಿಧ ಇಲಾಖೆಗಳ ನಡುವಿನ ಸಮನ್ವಯ ನಿರೀಕ್ಷಿತ ಮಟ್ಟದಲ್ಲಿಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅವರು, ಎಲ್ಲಾ ವಿಭಾಗಗಳು ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಪ್ರತಿಪಾದಿಸಿದರು. ಮುಖ್ಯವಾಗಿ ಅರಣ್ಯ ಇಲಾಖೆಯೊಂದಿಗೆ ನಿಕಟ ಸಮನ್ವಯ ಸಾಧಿಸಿ ಮರಗಳ ನಿರ್ವಹಣೆ ಹಾಗೂ ತೆರವು ಕಾರ್ಯಗಳನ್ನು ಸುಗಮಗೊಳಿಸಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಬಿಡಿಎ ವ್ಯಾಪ್ತಿಯ ಖಾಲಿ ಸೈಟ್‍ಗಳಲ್ಲಿ ಮಾಲಕರು ಇಂದಿಗೂ ಕಸವನ್ನು ಸ್ವಚ್ಛ ಮಾಡದಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅಂತಹ ಜಾಗಗಳನ್ನು ತಕ್ಷಣವೇ ಸ್ವಚ್ಛಗೊಳಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸರಕಾರ ಮಾಡುತ್ತಿರುವ ಗುಣಮಟ್ಟದ ಕೆಲಸಗಳು ಸಾರ್ವಜನಿಕರಿಗೆ ಸ್ಪಷ್ಟವಾಗಿ ಗೋಚರಿಸಬೇಕು ಮತ್ತು ಕಮ್ಯುನಿಟಿ ಔಟ್ರೀಚ್ ಕಾರ್ಯಕ್ರಮಗಳ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಈ ಕುರಿತು ಅರಿವು ಮೂಡಿಸುವ ಕೆಲಸಗಳಾಗಬೇಕು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.
ಪ್ರಸ್ತುತ ಕಸದ ಸಮಸ್ಯೆಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತರಲಾಗಿದ್ದು, ಮುಂದಿನ ಹಂತವಾಗಿ ಪಾದಚಾರಿ ಮಾರ್ಗಗಳ ಅತಿಕ್ರಮಣವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಬೇಕು. ಅದರೊಂದಿಗೆ ನಗರದ ಪ್ರಮುಖ ಜಂಕ್ಷನ್‍ಗಳನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಲೇನ್ ಮಾರ್ಕಿಂಗ್ ಹಾಗೂ ರಿಫ್ಲೆಕ್ಟರ್‍ಗಳನ್ನು ಅಳವಡಿಸಿ ವಾಹನ ಸವಾರರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್, ಶಿಲ್ಪಾ ನಾಗ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಗದೀಶ್ ಜಿ., ಅಪರ ಆಯುಕ್ತರು, ಮುಖ್ಯ ಇಂಜಿನಿಯರ್‍ಗಳು, ಕಾರ್ಯಪಾಲಕ ಇಂಜಿನಿಯರ್‍ಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






