ಕರ್ನಾಟಕದ ಯಾವ ಬೇಡಿಕೆಯನ್ನೂ ಬಜೆಟ್ನಲ್ಲಿ ಈಡೇರಿಲ್ಲ: ಸಚಿವ ಕೃಷ್ಣ ಬೈರೇಗೌಡ ಆಕ್ರೋಶ
"ರಾಜ್ಯದ ತೆರಿಗೆ ಹಣದಿಂದ ಬಿಹಾರಕ್ಕೆ ಐದಾರು ಯೋಜನೆ ಕೊಟ್ಟಿದ್ದಾರೆ"

ಕೃಷ್ಣ ಬೈರೇಗೌಡ
ಬೆಂಗಳೂರು : ಕೇಂದ್ರ ಸರಕಾರದ ಬಜೆಟ್ ಮಂಡನೆಯು ಕರ್ನಾಟಕದ ಪಾಲಿಗೆ ಕರಾಳ ದಿನವಾಗಿದೆ. ಕರ್ನಾಟಕದ ಯಾವ ಬೇಡಿಕೆಯೂ ಈ ಬಜೆಟ್ನಲ್ಲಿ ಈಡೇರಿಲ್ಲ. ಕರ್ನಾಟಕಕ್ಕೆ ನ್ಯಾಯ ಕೊಡುವ ಕೆಲಸ ಆಗಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಟೀಕಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ತೆರಿಗೆ ಹಣದಿಂದ ಬಿಹಾರ ರಾಜ್ಯಕ್ಕೆ ಐದಾರು ಯೋಜನೆ ಕೊಟ್ಟಿದ್ದಾರೆ. ಹಾಗಾದರೆ, ಕರ್ನಾಟಕದವರು ಕಡ್ಲೆ ಬೀಜ ತಿನ್ನೋಕೆ ಇರೋದಾ? ಬಜೆಟ್ನಲ್ಲಿ ಕರ್ನಾಟಕಕ್ಕೆ ಬರೀ ಚೊಂಬು ಸಿಕ್ಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ಬಿಜೆಪಿ ಸರಕಾರ ಕರ್ನಾಟಕಕ್ಕೆ ಮಾಡುತ್ತಿರುವ ದ್ರೋಹ ಇದಾಗಿದೆ. ಹಣಕಾಸು ಆಯೋಗ ರಾಜ್ಯಕ್ಕೆ 11,495 ಕೋಟಿ ರೂ. ಕೊಡುವಂತೆ ಹೇಳಿತ್ತು. ಆದರೆ, ಈ ಅನುದಾನದ ಬಗ್ಗೆ ಬಜೆಟ್ನಲ್ಲಿ ಚಕಾರ ಎತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಒಂದು ಪೈಸೆ ಕೂಡ ಕೊಟ್ಟಿಲ್ಲ. ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ್ಕೆಕ್ಕೆ ಏನೂ ನೀಡಿಲ್ಲ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಬೆಂಗಳೂರು ನಗರ ದೇಶಕ್ಕೆ ಉದ್ಯೋಗ ಕೊಡುತ್ತಿದೆ. ಐಟಿ, ಬಿಟಿ ರಫ್ತಿನ ಮೂಲಕ ದೇಶಕ್ಕೆ ಹೆಚ್ಚಿನ ಆದಾಯ ಕೊಡುತ್ತಿದೆ. ಆದರೆ, ಬೆಂಗಳೂರಿಗೆ ಕೇಂದ್ರ ಬಜೆಟ್ನಲ್ಲಿ ಯಾವುದೆ ಸವಲತ್ತು ಕೊಟ್ಟಿಲ್ಲ. ಕೇಂದ್ರ ಸರಕಾರಕ್ಕೆ ಕೇವಲ ಉತ್ತರಪ್ರದೇಶ, ಬಿಹಾರ ಮಾತ್ರ ಕಾಣುತ್ತಿದೆ. ಕರ್ನಾಟಕ ಕಾಣಿಸುತ್ತಿಲ್ಲ, ತೆರಿಗೆ ಕಟ್ಟಿದ ಕನ್ನಡಿಗರು ಕಾಣುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.







