ಶೇ.60ಕ್ಕಿಂತ ಕಡಿಮೆ ಫಲಿತಾಂಶ | ವಿಷಯ ಶಿಕ್ಷಕರಿಗೆ ವಾರ್ಷಿಕ ವೇತನ ಬಡ್ತಿ ತಡೆಯದಂತೆ ಸೂಚನೆ : ಸಚಿವ ಮಧು ಬಂಗಾರಪ್ಪ

ಬೆಂಗಳೂರು, ಆ.11: ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ವಿಷಯ ಶಿಕ್ಷಕರಿಗೆ ವಾರ್ಷಿಕ ವೇತನ ಬಡ್ತಿಯನ್ನು ತಡೆಯದಂತೆ ಮೌಖಿಕವಾಗಿ ಇಲಾಖಾ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸೋಮವಾರ ವಿಧಾನಪರಿಷತ್‍ನಲ್ಲಿ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಎಸ್.ವ್ಹಿ.ಸಂಕನೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವೇತನ ಬಡ್ತಿ ತಡೆ ಆದೇಶವನ್ನು 2019ರಲ್ಲಿ ಬಿಜೆಪಿ ಸರಕಾರ ಮಾಡಿತ್ತು. ಇದನ್ನು ನಮ್ಮ ಸರಕಾರ ಮುಂದುವರೆಸಿದೆ. ಅದಾಗ್ಯೂ ಈ ಬಗ್ಗೆ ಇಲಾಖಾ ಮಟ್ಟದಲ್ಲಿ ಚರ್ಚೆ ಮಾಡಿ ವೇತನ ಬಡ್ತಿ ಹಾಗೂ ಶಿಕ್ಷಕರ ವೇತನದ ಅನುದಾನ ತಡೆ ಹಿಡಿಯದಿರಲು ಸೂಚನೆ ನೀಡಿದ್ದೇನೆ ಎಂದರು.
ನಿಗದಿತ ಫಲಿತಾಂಶ ಬರದ ಶಾಲಾ ಮುಖ್ಯ ಶಿಕ್ಷಕರಿಗೆ ಹಾಗೂ ವಿಷಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಕಳುಹಿಸಲಾಗಿದೆ. ಅಲ್ಲದೇ ಸುಧಾರಿತ ಫಲಿತಾಂಶ ಬರದಿರಲು ಶಿಕ್ಷಕರ ಕೊರತೆ ಪ್ರಮುಖ ಕಾರಣ ಎಂದು ಮನಗಂಡಿದ್ದೇವೆ. 2020ರವರೆಗೆ ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಸದ್ಯ ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಅವರು ಒಳಮೀಸಲಾತಿ ಕಲ್ಪಿಸುವ ಸಂಬಂಧ ಇತ್ತೀಚೆಗಷ್ಟೇ ಸರಕಾರಕ್ಕೆ ವರದಿ ನೀಡಿದ್ದಾರೆ. ಈ ವರದಿ ಆಧರಿಸಿ ಮುಂದಿನ ದಿನಗಳಲ್ಲಿ ಖಾಲಿಯಿರುವ ಬೋಧಕ ಹುದ್ದೆಗಳನ್ನು ಆದ್ಯತೆ ಮೇರೆಗೆ ನೇಮಿಸಲಾಗುವುದು ಎಂದು ಮಧು ಬಂಗಾರಪ್ಪ ಭರವಸೆ ನೀಡಿದರು.







