ದಾವೋಸ್ನಲ್ಲಿ ದೂರಸಂಪರ್ಕ, ಬಾಹ್ಯಾಕಾಶ, ಸೈಬರ್ ಸುರಕ್ಷತೆ ದೈತ್ಯ ಕಂಪೆನಿಗಳ ಜೊತೆ ಸಚಿವ ಎಂ.ಬಿ.ಪಾಟೀಲ್ ಚರ್ಚೆ

Photo: X/@MBPatil
ಬೆಂಗಳೂರು: ದೂರಸಂಪರ್ಕ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿರುವ ನೋಕಿಯಾ ಕಾರ್ಪೋರೇಷನ್ ಕರ್ನಾಟಕ ರಾಜ್ಯದಲ್ಲಿ ಜಾಗತಿಕ ಸಾಮಥ್ರ್ಯ ಕೇಂದ್ರ(ಜಿಸಿಸಿ)ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಒಲವು ವ್ಯಕ್ತಪಡಿಸಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕದ ಜೊತೆಗೆ 25 ವರ್ಷಗಳ ಸುದೀರ್ಘ ಸಹಯೋಗ ಹೊಂದಿರುವ, ಬೆಂಗಳೂರಿನಲ್ಲಿ ತನ್ನ ಜಾಗತಿಕ ಅತಿದೊಡ್ಡ ಸಂಶೋಧನಾ ಕೇಂದ್ರ ಹೊಂದಿರುವ ನೋಕಿಯಾ, 2ನೆ ಶ್ರೇಣಿಯ ನಗರಗಳೂ ಸೇರಿದಂತೆ ರಾಜ್ಯದಲ್ಲಿ ತನ್ನ ವಹಿವಾಟು ವಿಸ್ತರಣೆ ಸಂಬಂಧ ಮಾತುಕತೆ ನಡೆಸಿದೆ.
ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ನೋಕಿಯಾದ ಉನ್ನತಾಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಕಂಪೆನಿಯ ಭವಿಷ್ಯದ ವಿಸ್ತರಣಾ ಉಪಕ್ರಮಗಳಿಗೆ ಸರಕಾರದ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಲಾಗಿದೆ’ ಎಂದು ಪಾಟೀಲ್ ತಿಳಿಸಿದರು.
ಸುಸ್ಥಿರ ನಗರಾಭಿವೃದ್ಧಿಗೆ ಸಂಬಂಧಿಸಿದ ‘ಯೆಸ್ ಬೆಂಗಳೂರು’ ಉಪಕ್ರಮವು ಜಾಗತಿಕ ಮಾನ್ಯತೆ ಪಡೆದ ಸರಕಾರ ಹಾಗೂ ಉದ್ಯಮ ಸಹಯೋಗದ ವೇದಿಕೆಯನ್ನಾಗಿ ಅಭಿವೃದ್ಧಿಪಡಿಸುವ ವಿಶ್ವ ಆರ್ಥಿಕ ವೇದಿಕೆಯ ‘ಯೆಸ್- ಬಿಎಲ್ಆರ್ ಅಪ್ಲಿಂಕ್’ ಉಪಕ್ರಮಕ್ಕೆ ರಾಜ್ಯ ಸರಕಾರದ ಅಗತ್ಯ ಬೆಂಬಲ ನೀಡಲಿದೆ ಎಂದು ಅವರು ಭರವಸೆ ನೀಡಿದರು.
‘ವಿಶ್ವ ಆರ್ಥಿಕ ವೇದಿಕೆಯ ಅಪ್ಲಿಂಕ್ ಮುಖ್ಯಸ್ಥ ಜಾನ್ ಡುಟೊನ್ ಅವರ ಜೊತೆಗಿನ ಸಭೆಯಲ್ಲಿ ಇದನ್ನು ಪ್ರಮುಖವಾಗಿ ಚರ್ಚಿಸಲಾಗಿದೆ. ನಗರ ಕೇಂದ್ರೀತ ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಹಾಗೂ ನಗರಾಭಿವೃದ್ಧಿಗೆ ಕೊಡುಗೆ ನೀಡುವ ನವೋದ್ಯಮಗಳಿಗೆ ಹಣಕಾಸು ನೆರವು, ಉತ್ತೇಜನ, ಪ್ರಾಯೋಗಿಕ ಅವಕಾಶಗಳನ್ನು ಒದಗಿಸುವ ವಿಶಿಷ್ಟ ಉಪಕ್ರಮ ಇದಾಗಿದೆ. ಈ ಉಪಕ್ರಮವನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಕರ್ನಾಟಕ ಸರಕಾರ ನೀಡಿರುವ ಬೆಂಬಲವನ್ನು ಡಬ್ಲ್ಯುಇಎಫ್ ಅಪ್ಲಿಂಕ್ನ ನಿಯೋಗವು ಶ್ಲಾಘಿಸಿದೆ’ ಎಂದು ಅವರು ತಿಳಿಸಿದರು.
‘ಕ್ವಿನ್ ಸಿಟಿ’ ಯೋಜನೆಯ ಭಾಗವಾಗುವ ಹಾಗೂ ವಿಸ್ತರಣೆ ಸಾಧ್ಯತೆಗಳ ಬಗ್ಗೆ ಸೈಬರ್ ಸುರಕ್ಷತೆಯ ಜಾಗತಿಕ ಕಂಪೆನಿ ಕ್ಲೌಡ್ಫ್ಲೇರ್ನ ಜೊತೆಗಿನ ಸಭೆಯಲ್ಲಿ ಚರ್ಚಿಸಲಾಗಿದೆ. ಕಂಪೆನಿಯ ಭವಿಷ್ಯದ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರಕಾರದ ಅಗತ್ಯ ನೆರವಿನ ಭರವಸೆ ನೀಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಆಕರ್ಷಿಸುವುದರಲ್ಲಿ ಕರ್ನಾಟಕವು ಜಾಗತಿಕವಾಗಿ ಅತ್ಯುತ್ತಮ ತಾಣವಾಗಿದೆಯೆಂದು ಕಂಪೆನಿಯ ಜಾಗತಿಕ ಕಾರ್ಯತಂತ್ರ ಮುಖ್ಯಸ್ಥ ಸ್ಟೆಫಾನಿ ಕೊಹೆನ್ ಅವರು ಗುಣಗಾನ ಮಾಡಿದ್ದಾರೆ’ ಎಂದು ಪಾಟೀಲ್ ತಿಳಿಸಿದರು.
ಪಾಲುದಾರಿಕೆಗೆ ವಾಸ್ಟ್ ಸ್ಪೇಸ್ ಒಲವು: ಬಾಹ್ಯಾಕಾಶ ತಂತ್ರಜ್ಞಾನ, ಅತ್ಯಾಧುನಿಕ ತಯಾರಿಕೆ ಮತ್ತು ನಾವೀನ್ಯತೆ ಆಧಾರಿತ ಉಪಕ್ರಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರದ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ಅಮೆರಿಕದ ಬಾಹ್ಯಾಕಾಶ ತಂತ್ರಜ್ಞಾನ ಕಂಪೆನಿ ವಾಸ್ಟ್ ಸ್ಪೇಸ್ ಒಲವು ತೋರಿಸಿದೆ. ಯುಎಇ ಮೂಲದ ಬಹುರಾಷ್ಟ್ರೀಯ ಉದ್ಯಮ ಸಮೂಹವಾಗಿರುವ ಕ್ರೆಸೆಂಟ್ ಎಂಟರ್ ಪ್ರೈಸಿಸ್, ರಾಜ್ಯದ ಉದ್ದಿಮೆ ಹಾಗೂ ಕಂಪೆನಿಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ.
ಒಪ್ಪಂದಕ್ಕೆ ಆಸಕ್ತಿ: ರಾಜ್ಯ ಸರಕಾರದ ಜೊತೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಳ್ಳುವುದಕ್ಕೆ ಅಮೆರಿಕದ ವೈಮಾಂತರಿಕ್ಷ ಕಂಪೆನಿ ವೊಯೆಜರ್ ಟೆಕ್ನಾಲಜೀಸ್ ಕಂಪೆನಿ ತೀವ್ರ ಆಸಕ್ತಿ ವ್ಯಕ್ತಪಡಿಸಿದೆ. ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಂಶೋಧನಾ ಉಪಕ್ರಮಗಳಿಗೆ ಸಂಬಂಧಿಸಿದಂತೆ ಇಸ್ರೋ ಜೊತೆ ಪಾಲುದಾರಿಕೆ ಮಾಡಿಕೊಳ್ಳುವುದಕ್ಕೂ ಮುಂದೆ ಬಂದಿದೆ. ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಾನ್ಬೌಮ್ ಅವರ ಜೊತೆಗಿನ ಭೇಟಿಯಲ್ಲಿ, ರಾಜ್ಯದ ಬಯೊಫಾರ್ಮಾ ವಲಯದಲ್ಲಿ ಚಟುವಟಿಕೆ ವಿಸ್ತರಿಸುವ ಸಾಧ್ಯತೆಗಳನ್ನು ಚರ್ಚಿಸಲಾಗಿದೆ’ ಎಂದು ಪಾಟೀಲ್ ತಿಳಿಸಿದರು.
ಜಾಗತಿಕ ಕ್ಲೌಡ್ ಕಂಪೆನಿಗಳನ್ನು ರಾಜ್ಯಕ್ಕೆ ಆಕರ್ಷಿಸಲು ಅಮೆಜಾನ್ ವೆಬ್ ಸರ್ವಿಸಸ್ ಜೊತೆ ಚರ್ಚೆ
ಯುರೋಪ್ ಮುಕ್ತ ವ್ಯಾಪಾರ ಒಪ್ಪಂದದ(ಇಎಫ್ಟಿಎ) ಭಾಗವಾಗಿರುವ ಬಂಡವಾಳ ಹೂಡಿಕೆ ಬದ್ಧತೆಯಲ್ಲಿನ ಬಹುಪಾಲನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡಲು ರಾಜ್ಯ ಸರಕಾರವು ಲಿಚೆಂಟೈನ್ ಪ್ರಧಾನಿಗೆ ಮನವಿ ಮಾಡಿಕೊಂಡಿದೆ.
ಶುಕ್ರವಾರ ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಲಿಚೆಂಟೈನ್ ಪ್ರಧಾನಿ ಶ್ರೀಮತಿ ಬ್ರಿಗೆಟ್ ಹ್ಯಾಸ್ ಅವರನ್ನು ಭೇಟಿಯಾಗಿ ಆ ದೇಶದ ಕೈಗಾರಿಕಾ ಪರಿಣತಿ, ಕರ್ನಾಟಕದ ತಯಾರಿಕಾ ಹಾಗೂ ನಾವೀನ್ಯತಾ ಪರಿಸರದ ಸದ್ಬಳಕೆಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಪಡಿಸಲು ಫಲಪ್ರದ ಚರ್ಚೆ ನಡೆಸಲಾಯಿತು. ವಾಣಿಜ್ಯ ಬಾಂಧವ್ಯ ಗಟ್ಟಿಗೊಳಿಸಲು ರಾಜ್ಯಕ್ಕೆ ಭೇಟಿ ನೀಬೇಕೆಂದು ಲಿಚೆಂಟೈನ್ ಪ್ರಧಾನಿಗೆ ಆಹ್ವಾನ ನೀಡಲಾಗಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
‘ಜಾಗತಿಕ ಕ್ಲೌಡ್ ಮತ್ತು ಮೂಲಸೌಲಭ್ಯ ಕಂಪೆನಿಗಳನ್ನು ಅಧಿಕ ಸಂಖ್ಯೆಯಲ್ಲಿ ರಾಜ್ಯಕ್ಕೆ ಆಕರ್ಷಿಸಲು ವಿಶ್ವದ ಪ್ರಮುಖ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡಿಜಿಟಲ್ ಮೂಲಸೌಲಭ್ಯ ಕಂಪೆನಿ ಅಮೆಜಾನ್ ವೆಬ್ ಸರ್ವಿಸಸ್ನ(ಎಡಬ್ಲ್ಯುಎಸ್)ಉಪಾಧ್ಯಕ್ಷ ಮೈಕಲ್ ಪುಂಕೆ ಅವರ ಜೊತೆ ವಿವರವಾಗಿ ಚರ್ಚಿಸಲಾಗಿದೆ.
ರಾಜ್ಯದಲ್ಲಿ ವಿಪುಲ ಪ್ರಮಾಣದಲ್ಲಿ ಲಭ್ಯ ಇರುವ ಕುಶಲ ತಂತ್ರಜ್ಞರು, ನವೋದ್ಯಮಗಳು ಮತ್ತು ಡಿಜಿಟಲ್ ಮೂಲ ಸೌಲಭ್ಯಗಳ ಬಗ್ಗೆ ಮೈಕಲ್ ಪುಂಕ್ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಾಗತಿಕ ಕ್ಲೌಡ್ ಮತ್ತು ಡೇಟಾ ಸೆಂಟರ್ ನಿರ್ವಹಿಸುವ ಕಂಪೆನಿಗಳ ಅಗತ್ಯಗಳನ್ನೆಲ್ಲ ಪೂರೈಸುವುದಾಗಿ ಸರಕಾರ ಭರವಸೆ ನೀಡಿದೆ’ ಎಂದು ಅವರು ನುಡಿದರು.
ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಲಭ್ಯ ಇರುವ ಉತ್ತೇಜನೆಗಳು, ವಿದ್ಯುತ್ ಲಭ್ಯತೆ ಮತ್ತು ಬಳಕೆಗೆ ಸನ್ನದ್ಧಸ್ಥಿತಿಯಲ್ಲಿ ಇರುವ ಮೂಲಸೌಲಭ್ಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ರಾಜ್ಯದಲ್ಲಿನ ಉದ್ಯಮ ಸ್ನೇಹಿ ಪರಿಸರದ ಬಗ್ಗೆ ವಾಹನ ತಯಾರಿಕಾ ಕಂಪೆನಿ ವೋಲ್ವೊ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದೆ. ತಯಾರಿಕೆ, ತಂತ್ರಜ್ಞಾನ ಮತ್ತು ಕುಶಲ ತಂತ್ರಜ್ಞರ ಲಭ್ಯತೆ ಬಳಸಿಕೊಂಡು ರಾಜ್ಯದಲ್ಲಿನ ವಾಹನ ತಯಾರಿಕೆ ಚಟುವಟಿಕೆಗಳನ್ನು ವಿಸ್ತರಿಸಲು ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.







