ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಬೇಕು: ಸಚಿವ ಎಂ.ಬಿ.ಪಾಟೀಲ್

ಸಚಿವ ಎಂ.ಬಿ.ಪಾಟೀಲ್ (Photo source: X/@MBPatil)
ಬೆಂಗಳೂರು: ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬೇಕು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಐವರು ಶಾಸಕರಿದ್ದು, ಇಂತವರಿಗೆ ಸಚಿವ ಸ್ಥಾನ ಕೊಡಿ ಎಂದು ಹೇಳುವುದಿಲ್ಲ. ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದರು.
ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಿದ ಅವರು, ಮೃತಪಟ್ಟವರಿಗೆ, ಅನರ್ಹರಿಗೆ ಗ್ಯಾರಂಟಿ ಯೋಜನೆ ಫಲ ದೊರೆಯುವುದನ್ನು ತಪ್ಪಿಸಲು ಪರಿಷ್ಕರಣೆ ಮಾಡಲಾಗುತ್ತಿದೆ. ಬಿಜೆಪಿಯವರು ನಮ್ಮ ಗ್ಯಾರಂಟಿ ವಿರೋಧಿಸುತ್ತಾ ಬೇರೆ ರಾಜ್ಯಗಳಲ್ಲಿ ಅದನ್ನು ಜಾರಿ ಮಾಡಿದ್ದಾರೆ ಎಂದು ಆರೋಪಿಸಿದರು.
ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಐವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ನಮಗೆ ಯಾವುದೇ ರೀತಿಯ ಆತಂಕ ಇಲ್ಲ. ಅದು ಬೇರೆಯವರಿಗೆ ಇರಬೇಕು. 10 ರಿಂದ 15 ಶಾಸಕರು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಸಂಪರ್ಕದಲ್ಲಿದ್ದಾರೆ ಎಂಬ ಊಹಾಪೋಹ ಹಬ್ಬಿಸುವ ಕೆಲಸವಾಗುತ್ತಿದೆ ಎಂದರು.




