ರಾಜ್ಯದಲ್ಲಿ ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ-ಸಂಶೋಧನಾ ಸಂಸ್ಥೆ ಆರಂಭಿಸಿ; ಕೇಂದ್ರ ಸಚಿವ ಜೆ.ಪಿ.ನಡ್ಡಾಗೆ ಸಚಿವ ಎಂ.ಬಿ.ಪಾಟೀಲ್ ಪತ್ರ

ಜೆ.ಪಿ.ನಡ್ಡಾ(PTI)/ಎಂ.ಬಿ.ಪಾಟೀಲ್
ಬೆಂಗಳೂರು : ವಿಜ್ಞಾನ ಮತ್ತು ಔಷಧ ವಿಜ್ಞಾನ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಕೇಂದ್ರ ಸರಕಾರವು ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು(ಎನ್ಯಪಿಇಆರ್)ಆರಂಭಿಸಬೇಕು. ಇದಕ್ಕೆ ಅಗತ್ಯ ಭೂಮಿ, ಮೂಲಸೌಕರ್ಯ ಒದಗಿಸಲು ರಾಜ್ಯ ಸರಕಾರವು ಕ್ರಮ ವಹಿಸಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾರಿಗೆ ಪತ್ರ ಬರೆದ್ದಾರೆ.
ಬುಧವಾರ ಈ ಸಂಬಂಧ ಪತ್ರ ಬರೆದಿರುವ ಅವರು, ಹಿಂದೊಮ್ಮೆ ಈ ಕೇಂದ್ರವನ್ನು ಕರ್ನಾಟಕದಲ್ಲಿ ಪ್ರಾರಂಭಿಸಬೇಕೆಂದು ಕೇಂದ್ರ ಸರಕಾರವು ಆಲೋಚಿಸಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ರಾಜ್ಯದಲ್ಲಿರುವ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು, ಜೈವಿಕ ತಂತ್ರಜ್ಞಾನ (ಬಿಟಿ) ಕಂಪೆನಿಗಳು ಇತ್ಯಾದಿಗಳನ್ನು ಪರಿಗಣಿಸಿ ಈ ಚಿಂತನೆಗೆ ಮರುಜೀವ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯವು ಔಷಧ ವಿಜ್ಞಾನ, ಬಿಟಿ ಮತ್ತು ಆರೋಗ್ಯ ಸೇವೆಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಅದರಲ್ಲೂ ಬೆಂಗಳೂರೊಂದರಲ್ಲೇ 400ಕ್ಕೂ ಹೆಚ್ಚು ಬಿಟಿ ಕಂಪೆನಿಗಳಿವೆ. ಜೊತೆಗೆ ಇಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರ (ಎನ್ಸಿಬಿಎಸ್), ಬಯೋಇನ್ಫಮ್ರ್ಯಾಟಿಕ್ಸ್ ಮತ್ತು ಅಪ್ಲೈಡ್ ಬಯೋಟೆಕ್ನಾಲಜಿ (ಐಬಿಎಬಿ) ಮುಂತಾದ ಪ್ರತಿಷ್ಠಿತ ಸಂಸ್ಥೆಗಳಿವೆ. ರಾಜ್ಯ ಸರಕಾರದ ಬಯೊ-ಇನ್ನೋವೇಶನ್ ಸೆಂಟರ್ ಮತ್ತು ರಚನಾತ್ಮಕ ಬಿಟಿ ನೀತಿಯ ಮೂಲಕ ಈ ಕ್ಷೇತ್ರದ ನವೋದ್ಯಮಗಳಿಗೆ ಬೆಂಬಲ ಕೊಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ದೇಶದಲ್ಲಿರುವ ಬಿ.ಟಿ. ಕಂಪೆನಿಗಳ ಪೈಕಿ ಶೇ.60ರಷ್ಟು ಕರ್ನಾಟಕ ರಾಜ್ಯದಲ್ಲೇ ಇವೆ. ಭಾರತವು ಮಾಡುತ್ತಿರುವ ಒಟ್ಟು ಔಷಧಗಳ ರಫ್ತಿನಲ್ಲಿ ರಾಜ್ಯದ ಪಾಲು ಶೇ.12ರಷ್ಟಿದೆ. ಅಲ್ಲದೆ ಕ್ಲಿನಿಕಲ್ ಸಂಶೋಧನೆ, ವೈದ್ಯಕೀಯ ಸಾಧನ ಸಲಕರಣೆಗಳ ತಯಾರಿಕೆ ಮತ್ತು ಎಪಿಐ ಉತ್ಪಾದನೆಯ ಕಾರ್ಯಜಾಲ ನಮ್ಮಲ್ಲಿದೆ. ಇವೆಲ್ಲವುಗಳನ್ನು ಪರಿಗಣಿಸಿ ರಾಜ್ಯಕ್ಕೆ ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಮಂಜೂರು ಮಾಡಬೇಕು ಎಂದು ಪಾಟೀಲ್ ತಮ್ಮ ಪತ್ರದಲ್ಲಿ ಗಮನಸೆಳೆದಿದ್ದಾರೆ.







