ಫೆ.5ಕ್ಕೆ ಬೆಂಗಳೂರಿನಲ್ಲಿ ಎಲ್ಲ ರಾಜ್ಯಗಳ ಉನ್ನತ ಶಿಕ್ಷಣ ಮಂತ್ರಿಗಳ ಸಮಾವೇಶ : ಸಚಿವ ಎಂ.ಸಿ. ಸುಧಾಕರ್

- ಸಚಿವ ಡಾ.ಎಂ.ಸಿ. ಸುಧಾಕರ್
ಬೆಂಗಳೂರು : ಕೇಂದ್ರ ಸರಕಾರವು ಜಾರಿ ಮಾಡಲು ಹೊರಟಿರುವ ಯುಜಿಸಿ ರೆಗ್ಯುಲೇಶನ್ 2025ರ ಕರಡು ಅಧಿಸೂಚನೆ ಕುರಿತು ಚರ್ಚಿಸಲು ಎಲ್ಲಾ ರಾಜ್ಯಗಳ ಉನ್ನತ ಶಿಕ್ಷಣ ರಾಜ್ಯ ಸಚಿವರ ಸಮಾವೇಶ ಫೆ.5ರಂದು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.
ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ವಿಶ್ವವಿದ್ಯಾನಿಲಯಗಳಲ್ಲಿ ಬೋಧಕರ ನೇಮಕಾತಿ, ಬಡ್ತಿಗೆ ಕನಿಷ್ಠ ಅರ್ಹತೆಗಳು, ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಶೈಕ್ಷಣಿಕ ಗುಣಮಟ್ಟ ಮತ್ತು ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ನಿರ್ವಹಣೆ ಕುರಿತು ಕೇಂದ್ರ ಸರಕಾರವು ಯುಜಿಸಿ ರೆಗ್ಯುಲೇಶನ್ 2025 ಹೆಸರಿನಲ್ಲಿ ಹಳೆಯ ನಿಮಗಳನ್ನು ತಿದ್ದುಪಡಿ ಮಾಡಲು ಹೊರಟಿದೆ. ಸಮಾವೇಶದಲ್ಲಿ ಯುಜಿಸಿ ರೆಗ್ಯುಲೇಶನ್ 2025 ಕರಡು ನೀತಿ, ಅಲ್ಲದೆ ಎನ್ಇಪಿಯಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆಗಿರುವ ಪರಿಣಾಮಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದಿದ್ದಾರೆ.
ಯುಜಿಸಿ ಕರಡು ನಿಯಮಾವಳಿಗಳು ದೇಶದ ಉನ್ನತ ಶಿಕ್ಷಣ ವ್ಯವಸ್ಥೆಗೆ ವಿರುದ್ಧವಾಗಿವೆ. ಈ ನಿಯಮಾವಳಿಗಳಿಂದ ಇಲ್ಲಿಯವರೆಗೆ ರಾಜ್ಯಗಳು ನ್ಯಾಯಸಮ್ಮತವಾಗಿ ಹೊಂದಿದ್ದ ಅಧಿಕಾರವನ್ನು ಮೊಟಕುಗೊಳಿಸುತ್ತದೆ. ಅಲ್ಲದೆ ಉನ್ನತ ಶಿಕ್ಷಣದಲ್ಲಿ ರಾಜ್ಯಗಳ ಸಾಂವಿಧಾನಿಕ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ಬಂಧಿಸುತ್ತದೆ. ಹೀಗಾಗಿ ಉಪಕುಲಪತಿಗಳ ನೇಮಿಸಲು ಶೋಧನಾ ಸಮಿತಿ ರಚಿಸುವ ಅಧಿಕಾರವನ್ನು ಸಂಪೂರ್ಣವಾಗಿ ರಾಜ್ಯಪಾಲರಿಗೆ ನೀಡಲಾಗುತ್ತಿದ್ದು, ರಾಜ್ಯ ಸರಕಾರಗಳು ಈ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಹೊರಗುಳಿದಂತಾಗುತ್ತದೆ ಎಂದು ಖಂಡಿಸಿದ್ದಾರೆ.
ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಮತ್ತು ಕೆಲವು ಎನ್ಡಿಎ ಪಾಲುದಾರರು ಈಗಾಗಲೇ ಈ ನಿಯಮಗಳ ಬಗ್ಗೆ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಯುಜಿಸಿ ಕರಡು ನಿಯಮಾವಳಿಗಳ ಸಾಧಕ-ಬಾಧಕಗಳನ್ನು ಚರ್ಚಿಸಲು ಮತ್ತು ಸಾಮಾನ್ಯ ನಿಲುವು ತೆಗೆದುಕೊಳ್ಳಲು ಈ ಸಮಾವೇಶವನ್ನು ಕರೆಯಲಾಗುತ್ತಿದೆ ಎಂದು ಅವರು ತಿಳಿಸಿದರು.
ಡೀಮ್ಡ್, ಖಾಸಗಿ ವಿಶ್ವವಿದ್ಯಾನಿಲಯಗಳು ಮತ್ತು ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಸೇರಿದಂತೆ ವಿವಿಧ ರೀತಿಯ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಪ್ರಗತಿಯ ಮೇಲೆ ಈ ನಿಯಮಗಳ ಅಡ್ಡ ಪರಿಣಾಮಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲು ಸಮಾವೇಶವನ್ನು ಆಯೋಜಿಸಲಾಗಿದೆ. ಸಮಾವೇಶದಲ್ಲಿ ಕೈಗೊಂಡ ನಿರ್ಧಾರಗಳನ್ನು ಕೇಂದ್ರ ಸರಕಾರ ಮತ್ತು ಯುಜಿಸಿ ತಿಳಿಸಲಾಗುವುದು ಎಂದು ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.
ರಾಜ್ಯಗಳನ್ನು ಸಮಾಲೋಚಿಸದೆ ತನ್ನ ನಿಬಂಧನೆಗಳನ್ನು ಹೇರುವ ಯುಜಿಸಿಯ ಏಕಪಕ್ಷೀಯ ಕ್ರಮವು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದ್ದು, ಫೆಡರಲ್ ನೀತಿಯನ್ನೇ ದುರ್ಬಲಗೊಳಿಸುತ್ತದೆ. ನೂತನವಾಗಿ ಜಾರಿ ಮಾಡಲಾಗುತ್ತಿರುವ ನಿಯಮಾವಳಿಗಳನ್ನು ಹಿಂಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಉನ್ನತ ಶಿಕ್ಷಣ ಸಚಿವರ ಈ ಸಮಾವೇಶವು ಬಹಳ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ.







