ಸಚಿವ ನಾಗೇಂದ್ರ ದಿಲ್ಲಿ ಪ್ರವಾಸ: ಕುತೂಹಲ ಸೃಷ್ಟಿಸಿದ ಸಿಎಂ ಹೇಳಿಕೆ

ಬಿ.ನಾಗೇಂದ್ರ/ಡಿ.ಕೆ.ಶಿವಕುಮಾರ್
ಬೆಂಗಳೂರು : ಸಂಪುಟದಲ್ಲಿ ಖಾಲಿಯಿರುವ ಒಂದು ಸಚಿವ ಸ್ಥಾನ ಭರ್ತಿ ಹಾಗೂ ಕಾಂಗ್ರೆಸ್ ಪಕ್ಷದ 100ಕಚೇರಿಗಳ ಶಂಕುಸ್ಥಾಪನೆಗೆ ಸಮಯ ನಿಗದಿ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೊಸದಿಲ್ಲಿಗೆ ತೆರಳಿದ ಬೆನ್ನಲ್ಲೇ ಸಾಂಖ್ಯಿಕ ಮತ್ತು ಯೋಜನಾ ಇಲಾಖೆ ಸಚಿವ ಬಿ.ನಾಗೇಂದ್ರ ದಿಲ್ಲಿ ಪ್ರವಾಸ ಕೈಗೊಂಡಿರುವುದು ಕುತೂಹಲ ಸೃಷ್ಟಿಸಿದೆ.
ಬಿ.ನಾಗೇಂದ್ರ ಅವರು ನಾಳೆ(ಆ.28)ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಈ ಮಧ್ಯೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಡಿ.ಕೆ.ಶಿವಕುಮಾರ್, ‘ನಾಗೇಂದ್ರ ರಾಜೀನಾಮೆ ಸದ್ಯಕ್ಕಿಲ್ಲ, ಮುಂದೆ ನೋಡೋಣ’ ಎಂದು ಹೇಳಿಕೆ ನೀಡಿದ್ದು, ಚರ್ಚೆಗಳಿಗೆ ಕಾರಣವಾಗಿದೆ.
ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ರಾಯಚೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಈ ನಡುವೆ ಸಿಬಿಐ ನಾಗೇಂದ್ರ ವಿರುದ್ದ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದರೆ ಸರಕಾರಕ್ಕೆ ಮುಜುಗರವಾಗಲಿದೆ. ಆ ಹಿನ್ನೆಲೆಯಲ್ಲಿ ನಾಗೇಂದ್ರ ರಾಜೀನಾಮೆ ಪಡೆಯುವುದು ಸೂಕ್ತವೆಂಬ ಅಭಿಪ್ರಾಯ ಕಾಂಗ್ರೆಸ್ ವಲಯದಿಂದ ವ್ಯಕ್ತವಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಖಾಲಿ ಇರುವ ಒಂದು ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆಯೂ ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಮಹಿಳಾ ಶಾಸಕರ ಪೈಕಿ ಸಚಿವ ಸ್ಥಾನಕ್ಕಾಗಿ ಹಲವು ಮಂದಿ ಆಕಾಂಕ್ಷಿಗಳಾಗಿದ್ದು, ಈ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.






