ಕೆಎಸ್ಸಾರ್ಟಿಸಿ ‘ಅಪಘಾತ ತುರ್ತು ಸ್ಪಂದನ ವಾಹನ’ಗಳಿಗೆ ಚಾಲನೆ ನೀಡಿದ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಶನಿವಾರ ನಗರದಲ್ಲಿ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಕೆಎಸ್ಸಾರ್ಟಿಸಿ ಬಸ್‍ಗಳಿಗೆ ಅವಘಡ ಉಂಟಾದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಲು ‘ಅಪಘಾತ ತುರ್ತು ಸ್ಪಂದನ ವಾಹನ’ಗಳಿಗೆ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಅಪಘಾತ ತುರ್ತು ಸ್ಪಂದನ ವಾಹನಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‍ಗಳು ಮಾರ್ಗ ಮಧ್ಯೆ ಅಪಘಾತ ಅಥವಾ ಅವಘಡಕ್ಕೀಡಾದಲ್ಲಿ ಸದರಿ ವಾಹನವನ್ನು ಶೀಘ್ರವಾಗಿ ರಿಪೇರಿಗೊಳಿಸಲು ‘ಮೊಬೈಲ್ ವರ್ಕ್‍ಶಾಪ್’ ಮಾದರಿಯಲ್ಲಿ ರೂಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಎರಡು ಅಪಘಾತ ತುರ್ತು ಸ್ಪಂದನ ವಾಹನಗಳನ್ನು ಬೆಂಗಳೂರು ಹಾಗೂ ಮೈಸೂರು ಕೇಂದ್ರ ಸ್ಥಳಗಳಲ್ಲಿ ನಿಯೋಜಿಸಲಾಗುವುದು. ಇದರಿಂದ ಬೆಂಗಳೂರು ಸುತ್ತಮುತ್ತ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಪ್ರದೇಶದಲ್ಲಿ ಉಂಟಾಗುವ ಅಪಘಾತ, ಅವಘಢಗಳನ್ನು ಶೀಘ್ರದಲ್ಲಿ ಸ್ಪಂದಿಸಲು ಅನುಕೂಲವಾಗುತ್ತದೆ ಎಂದರು.
ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ರಾಜ್ಯದ ಹಾಗೂ ಅಂತರ್‍ರಾಜ್ಯದ ಭಾಗಗಳಿಗೆ ವಿವಿಧ ಮಾದರಿಯ ಬಸ್‍ಗಳು ವಿವಿಧ ಸ್ಥಳಗಳಿಗೆ ಕಾರ್ಯಾಚರಣೆಯಾಗುತ್ತಿದೆ. ಸದರಿ ಬಸ್‍ಗಳು ವಿವಿಧ ಸ್ಥಳಗಳಲ್ಲಿ ತಾಂತ್ರಿಕ ದೋಷದಿಂದಾಗಿ ಕೆಟ್ಟು ನಿಲ್ಲುವ ಸಂದರ್ಭದಲ್ಲಿ, ಉಂಟಾಗುವ ಸಂಚಾರ ಸಮಸ್ಯೆ ಪರಿಹರಿಸಲು ಈ ವಾಹನವು ಸಹಕಾರಿಯಾಗಲಿದ್ದು, ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ ಎಂದು ತಿಳಿಸಿದರು.
ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದ ತಾಂತ್ರಿಕ ಸಿಬ್ಬಂದಿ ವಾಹನ ಅವಘಡ, ಅಪಘಾತ ಸಮಯದಲ್ಲಿ ಶೀಘ್ರವಾಗಿ ಬಿಡಿಭಾಗಗಳು ಮತ್ತು ಇತರೆ ಪರಿಕರಗಳೊಂದಿಗೆ ಸದರಿ ಸ್ಥಳಗಳಿಗೆ ತೆರಳಿ ವಾಹನ ದುರಸ್ಥಿಗೊಳಿಸಲು ‘ಮೊಬೈಲ್ ವರ್ಕ್‍ಶಾಪ್’ ವಾಹನವನ್ನು ಸೇರ್ಪಡೆಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಬಸ್‍ಗಳು ಅಪಘಾತ, ಅವಘಡಕ್ಕೀಡಾದಲ್ಲಿ (ಬ್ರೇಕ್‍ಡೌನ್) ಚಾಲಕ, ನಿರ್ವಾಹಕರಿಗೆ ತಕ್ಷಣದಲ್ಲಿ ಸಹಾಯ ನೀಡಲು ಹಾಗೂ ಗಾಯಗೊಂಡಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಸಹ ಸ್ಪಂದನ ವಾಹನವು ಉಪಯುಕ್ತವಾಗುತ್ತದೆ. ಪ್ರತಿ ವಾಹನದ ಬೆಲೆ.7.22 ಲಕ್ಷ ರೂ.ಗಳಾಗುತ್ತದೆ. ಜನವರಿ 2026ರ ಅಂತ್ಯಕ್ಕೆ ಹೆಚ್ಚುವರಿಯಾಗಿ 10 ಹೊಸ ವಾಹನಗಳು ಸೇರ್ಪಡೆಗೊಳ್ಳಲಿದ್ದು, ಸದರಿ ವಾಹನಗಳನ್ನು ಉಳಿದ ಜಿಲ್ಲೆಗಳಿಗೆ ಕ್ರಮವಾಗಿ ನಿಯೋಜಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಭರಮಗೌಡ(ರಾಜು) ಕಾಗೆ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್ ಎಂ.ವೈ. ಪಾಟೀಲ, ಬಿಎಂಟಿಸಿ ಅಧ್ಯಕ್ಷ ವಿ.ಎಸ್.ಆರಾಧ್ಯ, ಉಪಾಧ್ಯಕ್ಷ ನಿಕೇತ್‍ರಾಜ್.ಎಂ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಮುಹಮ್ಮದ್ ರಿಝ್ವಾನ್ ನವಾಬ್ ಮತ್ತಿತರರು ಉಪಸ್ಥಿತರಿದ್ದರು.







