ನದಿಗಳ ನೀರು ಕಲುಷಿತಗೊಳಿಸುವ ಕಾರ್ಖಾನೆಗಳ ವಿರುದ್ಧ ಮುಲಾಜಿಲ್ಲದೆ ಕ್ರಮ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ನದಿಗಳ ನೀರನ್ನು ಕಲುಷಿತಗೊಳಿಸುವ ಯಾವುದೇ ಕೈಗಾರಿಕೆಗಳು, ಕಾರ್ಖಾನೆಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ನಗರದ ಪರಿಸರ ಭವನದಲ್ಲಿ ಬೆಂಗಳೂರು ಜಲ ಮಂಡಳಿ ಅಧಿಕಾರಿಗಳ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಕೈಗಾರಿಕೆಗಳು ತಮ್ಮ ಜವಾಬ್ದಾರಿಯನ್ನು ಮರೆತು ನದಿ ಮೂಲಗಳಿಗೆ ಹಾನಿ ಮಾಡಿದರೆ ಅಂತಹ ಕಾರ್ಖಾನೆಗಳನ್ನು ಯಾವುದೇ ಮುನ್ಸೂಚನೆ ನೀಡದೆ ಮುಚ್ಚಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ನದಿಗಳ ತೀರದಲ್ಲಿರುವ ಎಲ್ಲ ಕಾರ್ಖಾನೆಗಳು ಹಾಗೂ ಕೈಗಾರಿಕೆಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶ ರವಾನಿಸಲಾಗಿದ್ದು, ಎಲ್ಲರೂ ಕಡ್ಡಾಯವಾಗಿ ಎಸ್‍ಟಿಪಿ(ತ್ಯಾಜ್ಯನೀರು ಶುದ್ಧೀಕರಣ ಘಟಕ) ಅಳವಡಿಸಿಕೊಳ್ಳಬೇಕು. ನಿಯಮ ಮೀರಿ ನೇರವಾಗಿ ನದಿ ನೀರನ್ನು ಕಲುಷಿತಗೊಳಿಸುವ ಕಾರ್ಖಾನೆಗಳ ವಿರುದ್ಧ ಮುಲಾಜಿಲ್ಲದೆ ಬಾಗಿಲು ಹಾಕಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಪ್ರಸ್ತುತ ಕೇವಲ ನಾಲ್ಕೈದು ನದಿಗಳನ್ನು ಹೊರತುಪಡಿಸಿದರೆ ಉಳಿದದ್ದೆಲ್ಲಾ ನದಿಗಳ ನೀರು ಸಂಪೂರ್ಣವಾಗಿ ಕಲುಷಿತಗೊಂಡಿವೆ. ಕೇವಲ ಬೆಂಗಳೂರು ನಗರ ಒಂದರಲ್ಲೇ ಬರೋಬ್ಬರಿ ನಾಲ್ಕು ಲಕ್ಷಕ್ಕೂ ಅಧಿಕ ಬೋರ್‍ವೆಲ್‍ಗಳಿವೆ ಎಂದು ರಾಮಲಿಂಗಾರೆಡ್ಡಿ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು ನಗರದಿಂದ ಪ್ರತಿದಿನ ಅಂದಾಜು 2,500 ಎಂಎಲ್‍ಡಿ (ಮಿಲಿಯನ್ ಲೀಟರ್) ಪ್ರಮಾಣದ ಚರಂಡಿ ಹಾಗೂ ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. ಈ ಕೊಳಚೆ ನೀರನ್ನು ಪರಿಸರಕ್ಕೆ ಬಿಡುವ ಮುನ್ನ ಕಡ್ಡಾಯವಾಗಿ ಸೆಕೆಂಡರಿ ಟ್ರೀಟ್‍ಮೆಂಟ್ ಅಂದರೆ ದ್ವಿತೀಯ ಹಂತದ ಶುದ್ಧೀಕರಣಕ್ಕೆ ಒಳಪಡಿಸಬೇಕಾದ ಅನಿವಾರ್ಯತೆಯಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಸದ್ಯ ಬೆಂಗಳೂರಿನಿಂದ ಹರಿದು ಹೋಗುತ್ತಿರುವ ಒಟ್ಟು ನೀರಿನಲ್ಲಿ ಬಹುಪಾಲು ನೇರವಾಗಿ ಕಾವೇರಿ ನದಿ ಹಾಗೂ ಇತರ ಜಲಮೂಲಗಳನ್ನು ಸೇರುತ್ತಿದೆ. ವಿಶೇಷವಾಗಿ, ಪ್ರತಿದಿನ ಸುಮಾರು 1,100 ಎಂಎಲ್‍ಡಿಯಷ್ಟು ಭಾರಿ ಪ್ರಮಾಣದ ನೀರು ಯಾವುದೇ ರೀತಿಯ ವೈಜ್ಞಾನಿಕ ಟ್ರೀಟ್‍ಮೆಂಟ್ ಇಲ್ಲದೆ ನೇರವಾಗಿ ನದಿಗಳಿಗೆ ಹರಿದು ಹೋಗುತ್ತಿರುವುದು ಆಂತಕಕಾರಿ ವಿಷಯವಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಬೆಂಗಳೂರಿನಿಂದ ಹೊರಹಾಕಲಾಗುತ್ತಿರುವ ಈ ಸಂಸ್ಕರಿಸದ ನೀರಿನಿಂದಲೇ ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ ಎಂದು ತಮಿಳುನಾಡು ಸರಕಾರ ಎನ್‍ಜಿಟಿಗೆ ದೂರು ನೀಡಿದೆ. ಈ ಎಲ್ಲಾ ಕಾನೂನು ಹಾಗೂ ಪರಿಸರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಮ್ಮ ಸರಕಾರವು ತ್ವರಿತಗತಿಯಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕಗಳ ನಿರ್ಮಾಣ ಹಾಗೂ ಸುಧಾರಣೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಜಲ ಮಂಡಳಿ ಅಧಿಕಾರಿಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.






