ಕಸ್ತೂರಿ ರಂಗನ್ ವರದಿ | ಸ್ಥಳಾಂತರ ಪ್ರಶ್ನೆಯೇ ಇಲ್ಲ, ಹಕ್ಕು-ಹಿತಾಸಕ್ತಿ ರಕ್ಷಣೆಯಾಗಬೇಕು : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಪಶ್ಚಿಮ ಘಟ್ಟಗಳನ್ನು ಉಳಿಸುವ ಜತೆಗೆ ಅಲ್ಲಿಂದ ಯಾರನ್ನೂ ಸ್ಥಳಾಂತರಿಸುವ ಪ್ರಶ್ನೆಯಿಲ್ಲ. ನಾವು ರೈತರು, ತೋಟಗಾರರು, ಆದಿವಾಸಿಗಳು ಮತ್ತು ಸ್ಥಳೀಯ ನಿವಾಸಿಗಳ ಹಕ್ಕು-ಹಿತಾಸಕ್ತಿಗಳನ್ನು ರಕ್ಷಣೆ ಮಾಡಬೇಕು ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡ ನೀಡಿರುವ ವರದಿಯನ್ನು ಆಧರಿಸಿ ಹೊರಡಿಸಿದ ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯ ಮೇಲಿನ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿದ ಸಚಿವರು, ಈ ವರದಿಯಿಂದ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಅಡ್ಡಿಯಾಗಬಾರದು. ಜತೆಗೆ ಅಲ್ಲಿಂದ ಅವರನ್ನು ಸ್ಥಳಾಂತರಿಸುವ ಪ್ರಶ್ನೆಯೂ ಇಲ್ಲ. ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಅನಗತ್ಯ ತಡೆ ಸಹ ಆಗಬಾರದೆಂದು ತಿಳಿಸಿದರು.
ಈ ಅಧಿಸೂಚನೆ ಕರಡು ಹಂತದಲ್ಲಿದ್ದು, ಅಂತಿಮವಾಗಿಲ್ಲ. ಆದ್ದರಿಂದ ರಾಜ್ಯ ಸರಕಾರಕ್ಕೆ ಆಕ್ಷೇಪಣೆಗಳು, ಸಲಹೆಗಳು ಮತ್ತು ಅಗತ್ಯವಿದ್ದಲ್ಲಿ ಪರ್ಯಾಯ ಗಡಿ ಪ್ರಸ್ತಾವನೆಗಳನ್ನು ಸಲ್ಲಿಸುವ ಅವಕಾಶವಿದೆ. ಹಾಗಾಗಿ ನಾವೆಲ್ಲರೂ ಎಚ್ಚೆತ್ತುಕೊಂಡು ಪಶ್ಚಿಮ ಘಟ್ಟಗಳ ಸಮಸ್ಯೆಗೆ ತಾರ್ಕಿಕ ಅಂತ್ಯ ಕೊಡಲು ಪ್ರಯತ್ನ ಪಡಬೇಕಿದೆ. ರಾಜ್ಯ ಸರಕಾರ ಈ ವಿಷಯವನ್ನು ಎಂದಿಗೂ ಲಘುವಾಗಿ ಪರಿಗಣಿಸಿಲ್ಲ. 2014ರಿಂದ ಕೇಂದ್ರ ಸರಕಾರ ಹೊರಡಿಸಿರುವ ವಿವಿಧ ಕರಡು ಅಧಿಸೂಚನೆಗಳ ಸಂದರ್ಭದಲ್ಲಿ ರಾಜ್ಯ ಸರಕಾರ ತನ್ನ ಅಭಿಪ್ರಾಯ, ಆಕ್ಷೇಪಣೆ ಮತ್ತು ಸಲಹೆಗಳನ್ನು ನಿರಂತರವಾಗಿ ಸಲ್ಲಿಸುತ್ತಾ ಬಂದಿದೆ. ಆ ಎಲ್ಲ ವಿವರಗಳನ್ನು ಸದನದಲ್ಲಿ ನೀಡಲಾಗಿದೆ. ರಾಜ್ಯ ಮಟ್ಟದ ತಜ್ಞ ಸಮಿತಿ, ಜಿಲ್ಲಾ ಮಟ್ಟದ ಸಮಿತಿಗಳು ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಸಮಾಲೋಚನೆ ಈಗಾಗಲೇ ಜನಪ್ರತಿನಿಧಿಗಳೊಂದಿಗೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
2021, 2022 ಹಾಗೂ 2024ರಲ್ಲಿಯೂ ರಾಜ್ಯ ಸಚಿವ ಸಂಪುಟವು ಈ ವಿಷಯದ ಕುರಿತು ತನ್ನ ನಿಲುವನ್ನು ದೃಢವಾಗಿ ಸ್ಪಷ್ಟಪಡಿಸಿದೆ. ಹಾಗೆಯೇ 2024ರ ಕರಡು ಅಧಿಸೂಚನೆಯ ಸಂದರ್ಭದಲ್ಲಿ 10 ಜಿಲ್ಲೆಗಳ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆಯಲು ಪ್ರಕ್ರಿಯೆ ಕೈಗೊಳ್ಳಲಾಗಿತ್ತು. 26 ಸೆಪ್ಟೆಂಬರ್ 2024ರಂದು ರಾಜ್ಯ ಸಚಿವ ಸಂಪುಟವು ಆ ಕರಡು ಅಧಿಸೂಚನೆಯನ್ನು ತಿರಸ್ಕರಿಸಿ, ಕೇಂದ್ರ ಸರಕಾರವು ಅದನ್ನು ಹಿಂಪಡೆಯಬೇಕೆಂದು ಕೋರಿತ್ತು. ಅದೇ ರೀತಿಯಲ್ಲಿ ಪ್ರಸ್ತುತ 27 ಜುಲೈ 2026ರ 7ನೆ ಕರಡು ಅಧಿಸೂಚನೆ ಕುರಿತು 3 ಸೆಪ್ಟೆಂಬರ್ 2026ರಂದು ರಾಜ್ಯ ಸಚಿವ ಸಂಪುಟವು ಸಭೆ ಸೇರಿ ಕರಡು ಅಧಿಸೂಚನೆಯನ್ನು ಅದರ ಪ್ರಸ್ತುತ ರೂಪದಲ್ಲಿ ತಿರಸ್ಕರಿಸಲು ನಿರ್ಧರಿಸಲಾಗಿದೆ ಎಂದು ಸದನಕ್ಕೆ ಅವರು ತಿಳಿಸಿದರು.
ವೈಜ್ಞಾನಿಕ ಮತ್ತು ಸ್ಥಳೀಯ ಸ್ಥಿತಿಗತಿ ಪರಿಶೀಲನೆ ಮಾಡುವುದು. ಒಂದು ಗ್ರಾಮದಲ್ಲಿ ಅರಣ್ಯ ಪ್ರದೇಶವಿದೆ ಎಂಬ ಕಾರಣಕ್ಕೆ ಆ ಗ್ರಾಮದ ಸಂಪೂರ್ಣ ಪ್ರದೇಶವನ್ನು ಒಂದೇ ರೀತಿಯ ನಿಯಂತ್ರಣಕ್ಕೆ ಒಳಪಡಿಸುವ ವಿಧಾನದಿಂದ ಕೃಷಿ ಜಮೀನು, ತೋಟಗಳು, ಮನೆಗಳು ಮತ್ತು ಸಾರ್ವಜನಿಕ ಸೌಲಭ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹಿಂದಿನ ಕರಡು ಅಧಿಸೂಚನೆಗಳ ಸಂದರ್ಭದಲ್ಲಿ ರಾಜ್ಯ ಸರಕಾರ ಇದೇ ವಿಚಾರವನ್ನು ಕೇಂದ್ರದ ಗಮನಕ್ಕೆ ತಂದಿತ್ತು. ರಾಜ್ಯ ಅರಣ್ಯ ಪ್ರದೇಶ, ಸಂರಕ್ಷಿತ ಪ್ರದೇಶಗಳು ಹಾಗೂ ಸಂರಕ್ಷಿತ ಪ್ರದೇಶಗಳ ಈಎಸ್‍ಝೆಡ್ ಪ್ರದೇಶಗಳನ್ನು ಭೂಬಳಕೆ ಆಧಾರಿತವಾಗಿ ಗುರುತಿಸುವ ವಿಧಾನವನ್ನು ಪ್ರಸ್ತಾಪಿಸಿತ್ತು ಎಂದರು.
ಕರ್ನಾಟಕಕ್ಕೆ ಸಂಬಂಧಿಸಿದಂತೆ ಸುಮಾರು 20,668 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ(ಈಎಸ್‍ಎ) ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿದೆ. ರಾಜ್ಯದ 10 ಜಿಲ್ಲೆಗಳ 1,449 ಗ್ರಾಮಗಳು ಈ ಪ್ರಸ್ತಾವನೆಯಲ್ಲಿ ಸೇರಿವೆ. ಕರಡು ಅಧಿಸೂಚನೆಯಲ್ಲಿನ ಪ್ರದೇಶವು ರಾಜ್ಯದ ಶಿಫಾರಸುಗಳು, ಹಿತಾಸಕ್ತಿದಾರರ ಅಭಿಪ್ರಾಯಗಳು ಮತ್ತು ಈಎಸ್‍ಎ ತಜ್ಞ ಸಮಿತಿಯ ಪರಿಶೀಲನೆಯ ಆಧಾರದ ಮೇಲೆ ಅಂತಿಮಗೊಳ್ಳಲಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಕರ್ನಾಟಕದ ಈ 10 ಜಿಲ್ಲೆಗಳ ಈಎಸ್‍ಎ ವ್ಯಾಪ್ತಿಯಲ್ಲಿ ಸುಮಾರು 16,114.08 ಚದರ ಕಿಲೋಮೀಟರ್ ನಿಯಂತ್ರಿತ ಅರಣ್ಯ ಪ್ರದೇಶವಿದ್ದು, ಇದರಲ್ಲಿ ಸುಮಾರು 12,226.68 ಚ.ಕಿಲೋಮೀಟರ್ ಮೀಸಲು ಅರಣ್ಯ, 2,375.83 ಚದರ ಕಿಲೋಮೀಟರ್ ಇತರೆ ಅರಣ್ಯ ಪ್ರದೇಶ ಹಾಗೂ 961.57 ಚದರ ಕಿಲೋಮೀಟರ್ ಈಎಸ್ 7 ಪ್ರದೇಶ ಒಳಗೊಂಡಿದೆ. ಉಳಿದ ಸುಮಾರು 3,138.08 ಚದರ ಕಿಲೋಮೀಟರ್ ಪ್ರದೇಶ ಎಫ್‍ಎಸ್‍ಎ ನಿಯಂತ್ರಣಕ್ಕೆ ಒಳಪಡದ ಪ್ರದೇಶವಾಗಿದೆ ಎಂದು ವಿವರಿಸಿದರು.
‘ನಮ್ಮ ಸರಕಾರದ ದೃಷ್ಟಿಯಲ್ಲಿ ಗ್ರಾಮದ ಹೆಸರು ಮಾತ್ರವಲ್ಲದೆ, ಸರ್ವೆ ನಂಬರ್ ಮಟ್ಟದ ನಿಖರ ನಕ್ಷೆ, ಭೂಬಳಕೆ, ಜನವಸತಿ, ಕೃಷಿ, ತೋಟಗಾರಿಕೆ, ಅರಣ್ಯ, ಜಲಮೂಲ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು. ಪ್ರಸ್ತಾವಿತ ಗ್ರಾಮಗಳ ಪಟ್ಟಿ ಮತ್ತು ನಕ್ಷೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಗ್ರಾಮ ಪಂಚಾಯಿತಿಗಳ ಮೂಲಕ ಆಕ್ಷೇಪಣೆಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಬೇಕಾಗಿದೆ. ಪ್ರತಿಯೊಂದು ಗ್ರಾಮದ ಜನಸಂಖ್ಯೆ, ಭೂಬಳಕೆ ಮತ್ತು ಜೀವನೋಪಾಯದ ವಿವರಗಳನ್ನು ಸ್ಥಳ ಪರಿಶೀಲನೆ ಮಾಡಬೇಕು.
ಮನೆ, ಕೃಷಿ, ತೋಟಗಾರಿಕೆ, ಶಾಲೆ, ಆಸ್ಪತ್ರೆ, ರಸ್ತೆ, ಕುಡಿಯುವ ನೀರು ಮತ್ತು ಇತರ ಮೂಲಭೂತ ಸೌಲಭ್ಯಗಳಿಗೆ ಅಂತಿಮ ಅಧಿಸೂಚನೆಯಲ್ಲಿ ಸ್ಪಷ್ಟ ರಕ್ಷಣೆ ದೊರೆಯುವಂತೆ ಕೇಂದ್ರ ಸರಕಾರವನ್ನು ಕೋರಬೇಕು. ಪರಿಸರ ಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ ಮತ್ತು ವಿಪತ್ತು ತಡೆಗೆ ವಿಶೇಷ ಕೇಂದ್ರ ಅನುದಾನದ ಬೇಡಿಕೆ ಇಡಬೇಕು. ಗಣಿಗಾರಿಕೆ ಅಥವಾ ಕಲ್ಲುಗಣಿಗಾರಿಕೆ ಸ್ಥಗಿತದಿಂದ ಜೀವನೋಪಾಯ ಕಳೆದುಕೊಳ್ಳುವವರಿಗೆ ಪರ್ಯಾಯ ಜೀವನೋಪಾಯ ಮತ್ತು ಅಗತ್ಯ ನೆರವಿನ ವ್ಯವಸ್ಥೆಯನ್ನೂ ಪರಿಗಣಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕಾಗಿದೆ’
-ರಾಮಲಿಂಗಾರೆಡ್ಡಿ, ಅರಣ್ಯ ಸಚಿವ






