ಸ್ಪೀಕರ್ ಸದಾ ಪ್ರತಿಪಕ್ಷಗಳ ಮಿತ್ರ ಆಗಿರಬೇಕು : ಸಚಿವ ಯು.ಟಿ.ಖಾದರ್

ಬೆಂಗಳೂರು : ‘ವಿಧಾನಸಭೆಯ ಸ್ಪೀಕರ್ ಅವರು ಸದಾ ಪ್ರತಿಪಕ್ಷಗಳ ಮಿತ್ರನಾಗಿರಬೇಕು. ಮೊದಲೇ ಅವರಿಗೆ (ವಿಪಕ್ಷ) ಅಧಿಕಾರ ಇರುವುದಿಲ್ಲ. ಇನ್ನೂ ಸ್ಪೀಕರ್ ಕೂಡ ಅವರನ್ನು ಕೈಬಿಟ್ಟರೆ ಅವರು ಮತ್ತಷ್ಟು ಕುಸಿಯಲಿದ್ದಾರೆ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್, ಪ್ರತಿಪಕ್ಷಗಳ ಕಾಲೆಳೆದ ಪ್ರಸಂಗವು ವಿಧಾನಸಭೆಯಲ್ಲಿ ನಡೆಯಿತು.
ಶುಕ್ರವಾರ ವಿಧಾನಸಭೆಯಲ್ಲಿ ನೂತನ ಸ್ಪೀಕರ್ ಆಗಿ ಜಿ.ಎಸ್.ಪಾಟೀಲ್ ಆಯ್ಕೆಯಾದ ಬಳಿಕ ಅವರನ್ನು ಅಭಿನಂದಿಸಿ ಮಾತನಾಡಿದ ಯು.ಟಿ.ಖಾದರ್, ‘ವಿರೋಧ ಪಕ್ಷಗಳಿಗೆ ಸರಕಾರವಂತೂ ಇರುವುದಿಲ್ಲ. ಇನ್ನೂ ಸ್ಪೀಕರ್ ಅವರೂ ಕೈಬಿಟ್ಟರೆ ಅವರಿಗೆ ಬಹಳ ಕಷ್ಟ ಆಗುತ್ತದೆ. ಹೀಗಾಗಿ ಸ್ಪೀಕರ್ ವಿಪಕ್ಷಗಳಿಗೆ ಬೆಂಬಲವಾಗಿರಬೇಕು’ ಎಂದರು.
‘ಯಾರೂ ಬೇಕಾದರೂ ಮಂತ್ರಿ ಆಗಬಹುದು. ಆದರೆ, ಸ್ಪೀಕರ್ ಆಗಲು ಸಾಧ್ಯವಿಲ್ಲ. ಸ್ಪೀಕರ್ ಸ್ಥಾನವನ್ನು ಅಲಂಕರಿಸುವಂತಹ ವ್ಯಕ್ತಿಗಳು ನಿಜಕ್ಕೂ ಭಾಗ್ಯವಂತರು. ದೇವರ ಅನುಗ್ರಹ ವಿದ್ದರೆ ಮಾತ್ರವೇ ಆ ಸ್ಥಾನ ದೊರೆಯಲು ಸಾಧ್ಯ ಎಂಬುದು ನನ್ನ ಅನಿಸಿಕೆ. ಎಲ್ಲರಿಗೂ ಆ ಉನ್ನತ ಸ್ಥಾನ ಸಿಗುವುದಿಲ್ಲ, ಅದೊಂದು ಅವಕಾಶ. ಆ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಶಾಸಕ ಕೂಡ ಸ್ಪೀಕರ್ ಆಗಬೇಕು ಎಂದು ಅವರು ತಿಳಿಸಿದರು.
ವಿಧಾನಸಭೆಯ 223 ಮಂದಿ ಸದಸ್ಯರು ತಮ್ಮದೆ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಅವರೆಲ್ಲರೂ ಮಾತನಾಡುವ ಮುನ್ನ ಸ್ಪೀಕರ್ ಸ್ಥಿತಿಯನ್ನು ಅರಿತು ಮಾತನಾಡಬೇಕು. ಯಾರೇ ಸ್ಪೀಕರ್ ಸ್ಥಾನ ಅಲಂಕರಿಸಿದರೂ, ಆ ಸ್ಥಾನದ ಘನತೆಗೆ ಚ್ಯುತಿಯಾಗದಂತೆ, ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಎಂದು ಖಾದರ್ ಸಲಹೆ ನೀಡಿದರು.
ನೋವಿನ ಸಂಗತಿ: ಕಲಾಪದಲ್ಲಿ ಅನುಚಿತ ವರ್ತನೆ ಮಾಡಿದ ಹಿನ್ನೆಲೆಯಲ್ಲಿ 18 ಮಂದಿ ಸದಸ್ಯರನ್ನು ಅಮಾನತ್ತು ಮಾಡಿದ್ದು ಮತ್ತು ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಆಡಳಿತ ಪಕ್ಷವು ಉತ್ತರ ನೀಡದ ಹಿನ್ನೆಲೆಯಲ್ಲಿ ಪೀಠದಿಂದ ಅರ್ಧದಲ್ಲೆ ಹೊರ ನಡೆದದ್ದು, ಸ್ಪೀಕರ್ ಆಗಿ ನನಗೆ ಅತ್ಯಂತ ನೋವು ತಂದದಿದೆ ಎಂದು ಯು.ಟಿ.ಖಾದರ್ ಬೇಸರ ವ್ಯಕ್ತಪಡಿಸಿದರು.
ಸಂತೋಷ: ಸ್ಪೀಕರ್ ಆದ ಆರಂಭದಲ್ಲಿ ನನ್ನ ಭಾಷೆ ಅರ್ಥ ಆಗುವುದಿಲ್ಲ ಎಂದು ಹಲವು ಮಂದಿ ಹೇಳಿದ್ದರು. ಆದರೆ, ಇಂದು ಅದೇ ಜನ ಅತ್ಯಂತ ಒಳ್ಳೆಯ ಸ್ಪೀಕರ್, ಅವರ ಕನ್ನಡ ಭಾಷೆ ಬಹಳ ಚೆನ್ನಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸುತ್ತಿರುವುದು ನನಗೆ ಅತ್ಯಂತ ಸಂತಸ ತಂದಿದೆ ಎಂದು ಖಾದರ್ ನುಡಿದರು.
‘ನಾನು ಸ್ಪೀಕರ್ ಆಗಿ ನನ್ನ ತಿಳುವಳಿಕೆ ಹಿನ್ನೆಲೆಯಲ್ಲಿ ನನ್ನ ಕೈಲಾದಮಟ್ಟಿಗೆ ವಿಧಾನಸಭೆ ಕಲಾಪದ ಗುಣಮಟ್ಟ ಹೆಚ್ಚಿಸಲು ಹಲವು ಸುಧಾರಣೆಗಳನ್ನು ತಂದಿದ್ದೇನೆ. ಅಲ್ಲದೆ, ಸ್ಪೀಕರ್‍ಗಳ ಸಮ್ಮೇಳನವನ್ನು ಕರ್ನಾಟಕದಲ್ಲಿ ಮಾಡುವ ಮೂಲಕ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದೇವೆ’ ಎಂದರು.
‘ಗದಗ ಜಿಲ್ಲೆಯ ರೋಣ ಮತಕ್ಷೇತ್ರದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ, ಹಿರಿಯರಾದ ಜಿ.ಎಸ್.ಪಾಟೀಲ್, ಸುದೀರ್ಘ ಅನುಭವ ಇರುವವರು. ಜನಾನುರಾಗಿ ಆಗಿರುವ ಅವರು, ಸಾಮಾಜಿಕ-ಶೈಕ್ಷಣಿಕ ರಂಗದಲ್ಲಿ ತಮ್ಮದ ಆದ ಕೊಡುಗೆ ನೀಡಿದ್ದು, ಅವರು ಸ್ಪೀಕರ್ ಸ್ಥಾನ ಅಲಂಕರಿಸಿರುವುದು ನಿಜಕ್ಕೂ ಹೆಮ್ಮೆ. ಆ ಸ್ಥಾನದ ಹಿರಿಮೆಯನ್ನು ಸ್ಪೀಕರ್ ಜಿ.ಎಸ್.ಪಾಟೀಲ್ ಮತ್ತಷ್ಟು ಹೆಚ್ಚಿಸುವ ಭರವಸೆ ನನಗಿದೆ’ ಎಂದು ಖಾದರ್ ಹೇಳಿದರು.
ಮಂತ್ರಿ ಸ್ಥಾನ ನಿಶ್ಚಿತ: ‘ಸ್ಪೀಕರ್ ಸ್ಥಾನದಲ್ಲಿ ಕುಳಿತವರಿಗೆ ಮಂತ್ರಿ ಸ್ಥಾನ ನಿಶ್ಚಿತ. ಇದಕ್ಕೆ ನನ್ನನ್ನೂ ಸೇರಿ ಹಲವು ಉದಾಹರಣೆಗಳಿವೆ. ನಾನು ಸ್ಪೀಕರ್ ಆಗಿ ಕೆಲಸ ಮಾಡಿದ್ದು ತೃಪ್ತಿ ತಂದಿದೆ’
-ಯು.ಟಿ.ಖಾದರ್ ಆರೋಗ್ಯ ಸಚಿವ






