ಬಡ್ಡಿ ದರ ಕಡಿಮೆ ಮಾಡಿದ್ದರೂ 1.96 ಕೋಟಿ ರೂ.ಲಾಭ ಗಳಿಸಿದ ‘ಸಚಿವಾಲಯ ಸಹಕಾರ ಸಂಘ’

ಬೆಂಗಳೂರು, ಸೆ. 13: ಕರ್ನಾಟಕ ಸರಕಾರ ಸಚಿವಾಲಯ ಸಹಕಾರ ಸಂಘದ 2022-23ನೆ ಸಾಲಿನ 67ನೆ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಚಿವಾಲಯದ ಸಹಕಾರ ಸಂಘದ ಸಂಘದ ಸದಸ್ಯರಿಗೆ ಬಡ್ಡಿ ದರವನ್ನು ಕಡಿಮೆ ಮಾಡಿದ್ದರೂ 1.96 ಕೋಟಿ ರೂ.ಗಳ ಲಾಭಗಳನ್ನು ಗಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿ ಮಾಡಿದೆ ಎಂದು ಸಂಘದ ಅಧ್ಯಕ್ಷ ಹನುಮೇಗೌಡ ಎಚ್. ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇತ್ತೀಚೆಗೆ ನಡೆದ ಸಹಕಾರ ಸಂಘದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹನುಮೇಗೌಡ, ‘ಮುಂದಿನ ದಿನಗಳಲ್ಲಿ ಸಂಘದ ಚಟುವಟಿಕೆಗಳನ್ನು ಗಣಕೀಕರಣಗೊಳಿಸುವ ಯೋಜನೆ ರೂಪಿಸಲಾಗಿದೆ. ಅಲ್ಲದೆ, ಸದಸ್ಯರಿಗೆ ಡಿವಿಡೆಂಟ್ ಹೆಚ್ಚಿಗೆ ನೀಡಲು ಉದ್ದೇಶಿಸಲಾಗಿದೆ. ಸದಸ್ಯರ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರ ಮೊತ್ತವನ್ನು 2ಸಾವಿರ ರೂ.ನಿಂದ 5ಸಾವಿರ ರೂ.ಗಳಿಗೆ ಹೆಚ್ಚಿಸಲಾಗುವುದು’ ಎಂದು ಅವರು ಹೇಳಿದರು.
‘ಶೈಕ್ಷಣಿಕ, ವೈದ್ಯಕೀಯ ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಲಾಗುವುದು. ಅಲ್ಲದೆ, ಸದಸ್ಯರಿಗೆ ಸ್ಮಾರ್ಟ್‍ಕಾರ್ಡ್ ರೀತಿಯ ನವೀಕೃತ ಗುರುತಿನ ಚೀಟಿಯನ್ನು ನೀಡಲಾಗುತ್ತಿದ್ದು, ಸದಸ್ಯರಿಗೆ ಹೆಚ್ಚಿನ ಅನುಕೂಲ ಆಗುವ ನಿಟ್ಟಿನಲ್ಲಿ ಮತ್ತಷ್ಟು ಜನಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹನುಮೇಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಎಚ್.ಸಿ.ಗೀತಾ, ಪದಾಧಿಕಾರಿಗಳಾದ ರಾಜೇಂದ್ರ, ಮಹೇಶ್, ಅಭಿಜಿತ್, ಜಯಲಕ್ಷ್ಮಿ, ಪಿ.ಗುರುಸ್ವಾಮಿ, ನಾಗಭೂಷಣ್, ಬಿ.ಎಲ್.ಕಾಂತರಾಜು ಹಾಗೂ ಲಕ್ಷ್ಮಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







