FACT CHECK | ಕೇರಳ ವಿಧಾನಸಭೆಯಲ್ಲಿ ಧರ್ಮಸ್ಥಳದ ಬಗ್ಗೆ ನಿರ್ಣಯ ಎಂದು ಸುಳ್ಳು ಹೇಳಿದ ಶಾಸಕ ಭರತ್ ಶೆಟ್ಟಿ

ಡಾ. ವೈ ಭರತ್ ಶೆಟ್ಟಿ
ಬೆಂಗಳೂರು: ಧರ್ಮಸ್ಥಳ ದೂರಿನ ಕುರಿತು ನಡೆಯುತ್ತಿರುವ ಎಸ್ ಐ ಟಿ ತನಿಖೆಯ ಕುರಿತ ಚರ್ಚೆಯ ವೇಳೆ ಸರಕಾರದಿಂದ ಸ್ಪಷ್ಟನೆ ಕೇಳುವ ಭರದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಕೇರಳ ವಿಧಾನಸಭೆಯಲ್ಲಿ ಧರ್ಮಸ್ಥಳ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ ಪ್ರಸಂಗ ಸೋಮವಾರ ನಡೆದಿದೆ.
ವಿಧಾನಸಭೆಯಲ್ಲಿ ಧರ್ಮಸ್ಥಳಕ್ಕೆ ಬಿಜೆಪಿ ನಿಯೋಗ ಹೋಗಿದ್ದರ ಕುರಿತು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರು ವಿವರಣೆ ನೀಡಿ, ಧರ್ಮಸ್ಥಳದಲ್ಲಿ ಎಸ್ ಐ ಟಿ ತನಿಖೆಯನ್ನು ಆದಷ್ಟು ಬೇಗ ಮುಗಿಸಿ ಎಂದು ಗೃಹ ಸಚಿವರಿಗೆ ಮನವಿ ಮಾಡಿದರು.
ಆ ಬಳಿಕ ಸರಕಾರದಲ್ಲಿ ಸ್ಪಷ್ಟನೆ ಬೇಕು ಎಂದು ಮಾತು ಆರಂಭಿಸಿದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ ವೈ ಭರತ್ ಶೆಟ್ಟಿ ಕೇರಳ ಸರಕಾರವು ಅಲ್ಲಿನ ವಿಧಾನ ಸಭೆಯಲ್ಲಿ ಧರ್ಮಸ್ಥಳ ಪ್ರಕರಣದ ಬಗ್ಗೆ ನಿರ್ಣಯ ಕೈಗೊಂಡಿದೆ. ಅದನ್ನು ಯಾಕೆ ಮಾಡಿದಿರಿ ಎಂದು ಕೇಳಲು ನಮ್ಮ ಸರಕಾರಕ್ಕೆ ಶಕ್ತಿ ಇಲ್ಲವೇ? ಈ ಬಗ್ಗೆ ಉತ್ತರ ಕೊಡಿ ಗೃಹ ಸಚಿವರೇ? ಎಂದು ಆಗ್ರಹಿಸಿದರು.
ಅನಾಮಿಕನ ನಾರ್ಕೋ ಅನಾಲಿಸಿಸ್ ಟೆಸ್ಟ್ ಮಾಡಲಿ. ಧರ್ಮಸ್ಥಳ ವಿಚಾರವಾಗಿ ಉದ್ದೇಶಪೂರ್ವಕವಾಗಿ ಜಾಗತಿಕ ಸುದ್ದಿ ಮಾಡ್ತಿದ್ದಾರೆ. Aljazeeraದಲ್ಲಿ ಈ ಕುರಿತು ಸುದ್ದಿಯಾಗಿದೆ. ಪಾಕಿಸ್ತಾನದ ಒಂದೆರಡು ಟಿವಿಗಳಲ್ಲೂ ಬಂದಿದೆ. ಇದನ್ನು ಏಕೆ ಅಷ್ಟೊಂದು ದೊಡ್ಡದಾಗಿ ಮಾಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂದು ಭರತ್ ಶೆಟ್ಟಿ ಪ್ರಶ್ನಿಸಿದರು.
ಬಿಜೆಪಿ ಶಾಸಕ ಭರತ್ ಶೆಟ್ಟಿಯವರ ಹೇಳಿಕೆಯ ಕುರಿತು ಫ್ಯಾಕ್ಟ್ ಚೆಕ್ ಮಾಡಿದಾಗ, ಕೇರಳ ಸರಕಾರದಿಂದ ಧರ್ಮಸ್ಥಳ ದೂರಿನ ವಿಚಾರವಾಗಿ ಅಲ್ಲಿನ ವಿಧಾನ ಸಭೆಯಲ್ಲಿ ಯಾವುದೇ ನಿರ್ಣಯಗಳನ್ನು ಕೈಗೊಂಡಿರುವುದು ಎಲ್ಲಿಯೂ ವರದಿಯಾಗಿಲ್ಲ.
ಸುಪ್ರೀಂ ಕೋರ್ಟ್ ವಕೀಲ ಕೆವಿ ಧನಂಜಯ ಕೇರಳ ಸರಕಾರ ಧರ್ಮಸ್ಥಳ ಪ್ರಕರಣದಲ್ಲಿ ಮದ್ಯ ಪ್ರವೇಶಿಸುವಂತೆಯೂ, ಪ್ರಕರಣದ ತನಿಖೆ ಸಂಬಂಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವಂತೆ ಆಗ್ರಹಿಸಿದ್ದರು. ಕೇರಳ ಪೊಲೀಸರಿಗೆ ತನಿಖೆಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಬೇಕು ಎಂದೂ ಅವರು ಆಗ್ರಹಿಸಿದ್ದರು.
ಆದರೆ ಶಾಸಕ ಭರತ್ ಶೆಟ್ಟಿ ಅದನ್ನು ಕೇರಳ ಸರಕಾರದಿಂದ ಅಲ್ಲಿನ ವಿಧಾನ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ ಎಂದು ವಿಧಾನ ಸಭೆಯಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ.







