ಕೋಮುದ್ವೇಷ ಭಾಷಣ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ ಶಾಸಕ ಹರೀಶ್ ಪೂಂಜಾ: ದೂರುದಾರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಹರೀಶ್ ಪೂಂಜಾ
ಬೆಂಗಳೂರು : ಬೆಳ್ತಂಗಡಿಯ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಕೋಮುದ್ವೇಷ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರಕಾರ ಮತ್ತು ದೂರುದಾರರಿಗೆ ನೋಟಿಸ್ ಜಾರಿಗೊಳಿಸಿದೆ.
ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮೇಲಿನ ಆದೇಶ ಮಾಡಿ, ವಿಚಾರಣೆ ಮೇ 20 ಕ್ಕೆ ಮುಂದೂಡಿದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ತೆಕ್ಕಾರಿನ ಭಟ್ರಬೈಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಗ್ರಾಮದ ಮುಸ್ಲಿಮರ ಬಗ್ಗೆ ಮಾನಹಾನಿಕಾರ ಮತ್ತು ಕೋಮು ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಎಂ.ಎಸ್.ಇಬ್ರಾಹಿಂ ಮುಸ್ಲಿಯಾರ್ ಎಂಬವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಶಾಸಕರ ವಿರುದ್ಧ ಬಿಎನ್ ಎಸ್ ಕಾಯ್ದೆ ಕಲಂ 196, 353(2) ಅಡಿ ಪ್ರಕರಣ ದಾಖಲಾಗಿತ್ತು.





