ಸಂಕಷ್ಟದಲ್ಲಿರುವ ಬೀಡಿ ಉದ್ಯಮದ ಜಿಎಸ್ಟಿ ಕಡಿತಕ್ಕೆ ಕೇಂದ್ರ ಸರಕಾರವನ್ನು ಆಗ್ರಹಿಸುವಂತೆ ಸಿಎಂಗೆ ಶಾಸಕ ತನ್ವೀರ್ ಸೇಠ್ ಪತ್ರ

ಸಿದ್ದರಾಮಯ್ಯ/ತನ್ವೀರ್ ಸೇಠ್
ಮೈಸೂರು: ಲಕ್ಷಾಂತರ ಕಾರ್ಮಿಕರ ಜೀವನೋಪಾಯಕ್ಕೆ ಆಧಾರವಾಗಿರುವ ಶತಮಾನಗಳಷ್ಟು ಹಳೆಯ ಬೀಡಿ ಉದ್ಯಮವು ಗಂಭೀರ ಸಂಕಷ್ಟವನ್ನು ಎದುರಿಸುತ್ತಿದೆ. ಆದ್ದರಿಂದ ಬೀಡಿಯ ಮೇಲಿನ ಜಿಎಸ್ಟಿ ದರವನ್ನು 28%ರಿಂದ 18%ಕ್ಕೆ ಇಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರವು ಬೀಡಿ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್ಟಿ ದರವನ್ನು 18%ರಿಂದ 28%ಕ್ಕೆ ಹೆಚ್ಚಿಸಿರುವುದು ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಬೀಡಿ ಉದ್ಯಮವು ಕರ್ನಾಟಕ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಈ ಉದ್ಯಮವನ್ನು ಗುಡಿ ಕೈಗಾರಿಕೆ ಎಂದು ವರ್ಗೀಕರಿಸಲಾಗಿದ್ದು, ಇದರ ಸುಮಾರು 90% ಕಾರ್ಮಿಕರು ಮಹಿಳೆಯರೇ ಆಗಿದ್ದಾರೆ ಎಂದು ಮೈಸೂರು ಬೀಡಿ ಮಜ್ದೂರ್ ಸಂಘದ ಅಧ್ಯಕ್ಷರೂ ಆಗಿರುವ ತನ್ವೀರ್ ಸೇಠ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ತಂದೆ ದಿವಂಗತ ಅಝೀಝ್ ಸೇಠ್ ಅವರ ಸೇವೆಯನ್ನು ನೆನಪಿಸಿಕೊಂಡ ಶಾಸಕ ತನ್ವೀರ್ ಸೇಠ್, "ನನ್ನ ತಂದೆ ದಿವಂಗತ ಅಝೀಝ್ ಸೇಠ್ ಅವರು ಬಡ ಹಾಗೂ ಶೋಷಿತ ಬೀಡಿ ಕಾರ್ಮಿಕರ ಹಕ್ಕುಗಳ ಹೋರಾಟಗಾರರಾಗಿದ್ದು, ತಮ್ಮ ರಾಜಕೀಯ ಜೀವನವನ್ನು ಬೀಡಿ ಕಾರ್ಮಿಕರ ಕಲ್ಯಾಣಕ್ಕಾಗಿ ಅರ್ಪಿಸಿದ್ದರು. ಅವರು 1952ರಲ್ಲಿ ಮೈಸೂರು ಬೀಡಿ ಮಜ್ದೂರ್ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, 2001ರಲ್ಲಿ ಅಗಲುವ ತನಕ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದರು. ಅವರ ಪ್ರಯತ್ನದಿಂದ ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ ಬೀಡಿ ಕಾರ್ಮಿಕರನ್ನು ನೋಂದಾಯಿಸುವುದು ಮತ್ತು ಜಾರಿಗೆ ತರುವುದು ಸಾಧ್ಯವಾಯಿತು. ಜೊತೆಗೆ, ಬೀಡಿ ಕಾರ್ಮಿಕರಿಗಾಗಿ ಆರೋಗ್ಯ, ವಸತಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅನೇಕ ಕಲ್ಯಾಣ ಯೋಜನೆಗಳನ್ನು ಯಶಸ್ವಿಯಾಗಿ ತರಲಾಯಿತು. ಮೈಸೂರಿನಲ್ಲಿ ಕೇಂದ್ರ ಬೀಡಿ ಕಾರ್ಮಿಕರ ಆಸ್ಪತ್ರೆ ಸ್ಥಾಪನೆಗೊಂಡಿತು. ದೇಶದಲ್ಲಿ ಈ ರೀತಿಯ ಆಸ್ಪತ್ರೆ ಇದು ಒಂದೇ ಇದೆ", ಎಂದು ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಧೂಮಪಾನ ವಿರೋಧಿ ನೀತಿಗಳ ಪರಿಣಾಮವಾಗಿ ತಂಬಾಕು ಉತ್ಪನ್ನಗಳ ಉತ್ಪಾದನೆ ಹಾಗೂ ತಯಾರಿಕೆ ಸುಮಾರು 50% ಇಳಿದಿದೆ. ಇದರಿಂದ ಪರ್ಯಾಯ ಉದ್ಯೋಗಾವಕಾಶಗಳಿಲ್ಲದ ಬೀಡಿ ಕಾರ್ಮಿಕರ ಜೀವನೋಪಾಯ ತೀವ್ರ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಜಿಎಸ್ಟಿ ದರ ಹೆಚ್ಚಳ ಉದ್ಯಮವನ್ನು ಇನ್ನಷ್ಟು ಹಿನ್ನಡೆಯತ್ತ ತಳ್ಳುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
“ಅನೇಕ ಬೀಡಿ ಕೈಗಾರಿಕೆಗಳು ಮುಚ್ಚುವ ಹಂತ ತಲುಪಿದ್ದು, ವಿಶೇಷವಾಗಿ ಮಹಿಳಾ ಕಾರ್ಮಿಕರಲ್ಲಿ ನಿರುದ್ಯೋಗದ ಭೀತಿ ಹೆಚ್ಚಾಗಿದೆ. ಬೀಡಿ ಉದ್ಯಮ ಉಳಿಯಲು ಹಾಗೂ ಕಾರ್ಮಿಕರ ಜೀವನೋಪಾಯವನ್ನು ಕಾಪಾಡಲು ಜಿಎಸ್ಟಿ ದರವನ್ನು ತಕ್ಷಣ 18% ಗೆ ಇಳಿಸುವುದು ಅಗತ್ಯ,” ಎಂದು ತನ್ವೀರ್ ಸೇಠ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಲಕ್ಷಾಂತರ ಬೀಡಿ ಕಾರ್ಮಿಕರ ಹಿತಕ್ಕಾಗಿ ಈ ಬಗ್ಗೆ ರಾಜ್ಯ ಸರ್ಕಾರವು ಜಿಎಸ್ಟಿ ಕೌನ್ಸಿಲ್ ಮೂಲಕ ಈ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ತನ್ವೀರ್ ಸೇಠ್ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.







