ಅಕ್ರಮ ಹಣ ವರ್ಗಾವಣೆ ಪ್ರಕರಣ: ಶಾಸಕ ವೀರೇಂದ್ರ ಪಪ್ಪಿ ಮತ್ತೆ 4 ದಿನ ಈಡಿ ವಶಕ್ಕೆ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಮತ್ತು ಬೆಟ್ಟಿಂಗ್ ದಂಧೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಮತ್ತೆ 4 ದಿನಗಳ ಕಾಲ ಈಡಿ ವಶಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಆದೇಶಿಸಿದೆ.
ಸೆ.4ಕ್ಕೆ ಈಡಿ ಕಸ್ಟಡಿ ಅಂತ್ಯವಾದ ಬೆನ್ನಲ್ಲೆ ಅಧಿಕಾರಿಗಳು ಆರೋಪಿ ಪಪ್ಪಿಯನ್ನು ಗುರುವಾರ ಜನಪ್ರತಿನಿಧಿಗಳ ನ್ಯಾಯಾಲಯ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು, ಮತ್ತೆ 4 ದಿನಗಳ ಕಾಲ ಈಡಿ ವಶಕ್ಕೆ ನೀಡಿ ಆದೇಶಿಸಿತು.
ಈಡಿ ಅಧಿಕಾರಿಗಳು ಕಸ್ಟಡಿ ವೇಳೆ ಕೆಲವೊಂದು ನಿಯಮಗಳನ್ನು ಪಾಲಿಸಲು ನ್ಯಾಯಾಲಯ ಸೂಚನೆ ಕೊಟ್ಟಿದೆ. ಪ್ರತಿದಿನ ರಾತ್ರಿ 9 ಗಂಟೆವರೆಗೆ ಮಾತ್ರ ವಿಚಾರಣೆ ನಡೆಸುವಂತೆ ಸೂಚಿಸಿದೆ. ಉತ್ತಮ ಆಹಾರ, ವೈದ್ಯಕೀಯ ಸೇವೆ ವ್ಯವಸ್ಥೆ ಮಾಡುವಂತೆ ಆದೇಶ ಕೊಟ್ಟಿದೆ. ಸೆಪ್ಟೆಂಬರ್ 8ರಂದು ಸಂಜೆ 5 ಗಂಟೆಗೆ ನ್ಯಾಯಾಲಯದ ಮುಂದೆ ವೀರೇಂದ್ರ ಪಪ್ಪಿಯನ್ನು ಹಾಜರುಪಡಿಸಲು ಸೂಚನೆ ನೀಡಿದೆ.
Next Story





