ನನ್ನನ್ನು ಅಭ್ಯರ್ಥಿ, ಅವರ ತಂದೆ-ತಾಯಿ ಪ್ರಚಾರಕ್ಕೆ ಕರೆದೇ ಇಲ್ಲ : MLC ಅಬ್ದುಲ್ ಜಬ್ಬಾರ್

ಕೆ.ಅಬ್ದುಲ್ ಜಬ್ಬಾರ್
ದಾವಣಗೆರೆ : "ನನಗೆ (ದಾವಣಗೆರೆ ದಕ್ಷಿಣ ಉಪಚುನಾವಣೆಯ ಕಾಂಗ್ರೆಸ್) ಅಭ್ಯರ್ಥಿ, ಅವರ ತಂದೆ, ತಾಯಿ ಯಾರೂ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ" ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ದಾವಣಗೆರೆಯ ಕೆ.ಅಬ್ದುಲ್ ಜಬ್ಬಾರ್ ಅವರು ಹೇಳಿದ್ದಾರೆ.
ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡದೆ ಅವಮಾನ ಮಾಡಿದ್ದಾರೆ ಎಂಬ ಆರೋಪ ದೊಡ್ಡ ಚರ್ಚೆಯಲ್ಲಿರುವಾಗಲೇ ಜಿಲ್ಲೆಯಲ್ಲಿ ಪಕ್ಷದ ಹಿರಿಯ ಮುಖಂಡ, ಎಂಎಲ್ಸಿ ಅಬ್ದುಲ್ ಜಬ್ಬಾರ್ ಅವರು ನನ್ನನ್ನು ಪ್ರಚಾರಕ್ಕೆ ಬರಲು ಅಭ್ಯರ್ಥಿಯಾಗಲಿ, ಅವರ ತಂದೆ ತಾಯಿಯಾಗಲಿ ಕರೆದಿಲ್ಲ ಎಂದು ವಾರ್ತಾಭಾರತಿಗೆ ತಿಳಿಸಿದ್ದಾರೆ.
"ಮುಖ್ಯಮಂತ್ರಿಗಳು ಪ್ರಚಾರಕ್ಕೆ ಬಂದರು ಅವರು ನನ್ನ ಕರೆದಿಲ್ಲ.ಕೊನೆ ಪಕ್ಷ ಮುಖ್ಯಮಂತ್ರಿ ಕಚೇರಿಯಿಂದ ಕರೆ ಬಂದಿಲ್ಲ.." ಎಂದೂ ಅಬ್ದುಲ್ ಜಬ್ಬಾರ್ ಅವರು ಹೇಳಿದ್ದಾರೆ.
"ಅವರು ಕರೆಯದೆ ನಾವು ಹೇಗೆ ಹೋಗೋದು, ಕರೆಯದೇ ಹೋದರೆ ಬಂದು ಹಾಳು ಮಾಡಿದ್ರು ಅಂತ ಹೇಳಿಬಿಟ್ಟರೆ ಏನು ಮಾಡೋದು... ನಮ್ಮನ್ನು ಸೈಡ್ ಲೈನ್ ಮಾಡ್ತಾ ಇದ್ದಾರೋ, ಅವಶ್ಯಕತೆ ಇಲ್ಲ ಅಂತ ಬಿಟ್ಟಿದ್ದಾರಾ ಗೊತ್ತಿಲ್ಲ" ಎಂದು ಅಬ್ದುಲ್ ಜಬ್ಬಾರ್ ಕೇಳಿದ್ದಾರೆ.
"ಅವರಿಗೆ ಯಾರು ಬಂದ್ರೂ ಬರದೇ ಇದ್ದರೂ ನಾವು ಗೆಲ್ತೀವಿ ಅಂತ ಅವರಿಗೆ ವಿಶ್ವಾಸ ಇರಬಹುದು, ಅದಕ್ಕಾಗಿ ಕರೆದಿಲ್ಲ ಇರಬಹುದು " ಎಂದೂ ಅಬ್ದುಲ್ ಜಬ್ಬಾರ್ ವಾರ್ತಾಭಾರತಿಗೆ ಹೇಳಿದ್ದಾರೆ.
"ಸಚಿವ ಝಮೀರ್ ಅಹ್ಮದ್ ಖಾನ್ ಅವರು ಇಲ್ಲಿಗೆ ಬರಬೇಕಾಗಿಲ್ಲ ಎಂದು ಇಲ್ಲಿನ ಸಚಿವರು (ಮಲ್ಲಿಕಾರ್ಜುನ) ಹೇಳಿದ್ದು ಜನರಿಗೆ ಬೇಸರವಾಗಿದೆ" ಎಂದೂ ಅಬ್ದುಲ್ ಜಬ್ಬಾರ್ ವಾರ್ತಾಭಾರತಿ ಬಳಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆದರೆ ತನಗೆ ಪಕ್ಷ ಅಥವಾ ವರಿಷ್ಠರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ, ನನಗೆ ಪಕ್ಷದಲ್ಲಿ ಸಿಕ್ಕಿರುವ ಸ್ಥಾನಮಾನ ಕುರಿತು ತೃಪ್ತಿ ಇದೆ, ಪಕ್ಷ ಅಲ್ಪಸಂಖ್ಯಾತರಿಗೆ ಒಳ್ಳೆಯ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿದೆ ಎಂದೂ ಅಬ್ದುಲ್ ಜಬ್ಬಾರ್ ಹೇಳಿದ್ದಾರೆ.
ಟಿಕೆಟ್ ಮುಸ್ಲಿಮರಿಗೆ ಕೊಡಿ, ಇಲ್ಲ ಎಂದಾದರೆ ಕುರುಬರಿಗೆ ಕೊಡಿ, ಯಾವುದೇ ಪ್ರಾತಿನಿಧ್ಯ ಇಲ್ಲದ ಸಮುದಾಯಕ್ಕೆ ಬೇಕಾದ್ರೂ ಕೊಡಿ ಅಂತ ಹೇಳಿದ್ದೆವು. ಆದರೆ ಹಾಗೆ ಆಗಲಿಲ್ಲ. ಎರಡು ವರ್ಷ ಬಿಟ್ಟು ಮುಸ್ಲಿಮರಿಗೆ ಟಿಕೆಟ್ ಕೊಡ್ತೀವಿ ಅಂತ ಪ್ರೆಸ್ ಮೀಟ್ ಮಾಡಿ ವರಿಷ್ಠರು ಹೇಳಿ ಅಂದಾಗ ಅದೆಲ್ಲ ನೋಡೋಣ ಅಂತ ಉಡಾಫೆ ರೀತಿ ಪ್ರತಿಕ್ರಿಯೆ ನೀಡಿದರು ಎಂದು ಅಬ್ದುಲ್ ಜಬ್ಬಾರ್ ಬೇಸರ ತೋಡಿಕೊಂಡಿದ್ದಾರೆ.






