ದಾವಣಗೆರೆ ಎಫೆಕ್ಟ್ : ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಎಲ್ಸಿ ಅಬ್ದುಲ್ ಜಬ್ಬಾರ್ ರಾಜೀನಾಮೆ

ಬೆಂಗಳೂರು : ದಾವಣಗೆರೆ ದಕ್ಷಿಣ ಉಪಚುನಾವಣೆ ಟಿಕೆಟ್ ನಿರಾಕರಣೆ ವಿವಾದದ ಬೆನ್ನಿಗೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಕೆ .ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರವನ್ನು ಬರೆದಿರುವ ಕೆ.ಅಬ್ದುಲ್ ಜಬ್ಬಾರ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷನಾಗಿ ಸೇವೆ ಸಲ್ಲಿಸುವುದು ನನಗೆ ದೊರೆತ ಗೌರವ ಎಂದು ಹೇಳಿದ್ದಾರೆ.
2023ರ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಮತ್ತು ಅಲ್ಪಸಂಖ್ಯಾತ ಇಲಾಖೆಗೆ ಅಗತ್ಯವಿದ್ದಾಗಲೆಲ್ಲಾ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಿದ್ದೇನೆ. ನಾನು ಇಡೀ ಕರ್ನಾಟಕ ರಾಜ್ಯವನ್ನು ಪ್ರವಾಸ ಮಾಡಿ ಅಲ್ಪಸಂಖ್ಯಾತರನ್ನು ಒಟ್ಟುಗೂಡಿಸಿದ್ದೇನೆ. ಅಲ್ಪಸಂಖ್ಯಾತ ಮತದಾರರು ಮತ್ತು ಪದಾಧಿಕಾರಿಗಳು ನಮ್ಮ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿದ್ದಾರೆ ಎಂದು ಜಬ್ಬಾರ್ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮವರೇ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ : ಅಬ್ದುಲ್ ಜಬ್ಬಾರ್
"ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನನ್ನ ವಿರುದ್ಧ ಅಲ್ಪಸಂಖ್ಯಾತ ಮುಖಂಡರು ಸುದ್ದಿಗೋಷ್ಠಿ ಮಾಡಿದ್ದರಿಂದ ಬೇಸರವಾಗಿ ನಾನು ರಾಜೀನಾಮೆ ನೀಡಿದ್ದೇನೆ. ಅವರಿಗೆ ಅರ್ಹತೆ ಇಲ್ಲ, ಟಿಕೆಟ್ ಕೊಟ್ಟಿದ್ದರೆ ಸೋಲುತ್ತಿದ್ದರು. ಹೀಗೆ ನಮ್ಮವರೇ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಅದಕ್ಕೆ ಈಗ ಅರ್ಹತೆ ಬೆಳೆಸಿಕೊಂಡ ಮೇಲೆ ನೋಡೋಣ ಎಂದು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದೇನೆ" ಎಂದು ಕೆ.ಅಬ್ದುಲ್ ಜಬ್ಬಾರ್ ಬೇಸರ ಹೊರಹಾಕಿದ್ದಾರೆ.
"ನಿನ್ನೆಯ ಸುದ್ದಿಗೋಷ್ಠಿ ನೋಡಿದರೆ, ಇದು ಎರಡನೇ ಬಣ ಎಂದು ಗೊತ್ತಾಗಿ ಬಿಡುತ್ತೆ, ಆ ರೀತಿ ಮಾತಾಡಿದ್ದಾರೆ. ಇನ್ನೂ ಫಲಿತಾಂಶವೇ ಬಂದಿಲ್ಲ. ಎಲ್ಲರೂ ಸೇರಿ ದಿಢೀರನೆ ಯಾಕೆ ಸುದ್ದಿಗೋಷ್ಠಿ ಮಾಡಿದರು. ಅದರ ಅವಶ್ಯಕತೆ ಏನಿತ್ತು?. ಮತದಾನದ ಮರುದಿನವೇ ಸುದ್ದಿಗೋಷ್ಠಿ ನಡೆಸಿ ಪ್ರಚೋದನೆ ನೀಡಿದ್ದಾರೆ. ನಮ್ಮ ತೇಜೋವಧೆ ಮಾಡುವಂತಹ ಕೆಲಸ ಮಾಡಿದ್ದಾರೆ. ಇದರಿಂದ ಬೇಜಾರಾಗಿದೆ, ಹಾಗಾಗಿ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದರು.






