ರಾಜ್ಯದ ಮೂರು ಜಿಲ್ಲೆಗಳಲ್ಲಿ ಬುಧವಾರ (ಮೇ 7) ಅಣಕು ಕವಾಯತು; ಬೆಂಗಳೂರಿನ 35 ಕಡೆ ಯುದ್ಧದ ಸೈರನ್
32 ಕಡೆಗಳಲ್ಲಿ ಅಣಕು ಪ್ರದರ್ಶನ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಯ ಬೆನ್ನಲ್ಲೇ ಕೇಂದ್ರದ ಗೃಹ ಇಲಾಖೆಯ ಸೂಚನೆ ಮೇರೆಗೆ ರಾಜ್ಯದ ಬೆಂಗಳೂರು, ಕಾರವಾರ ಹಾಗೂ ರಾಯಚೂರ್ ನಲ್ಲಿ ಬುಧವಾರ (ಮೇ 7) ಸಂಜೆ 4 ಗಂಟೆಗೆ ನಾಗರಿಕ ರಕ್ಷಣಾ ಅಣುಕು ಕವಾಯತು (ಮಾಕ್ ಡ್ರಿಲ್) ಜರುಗಲಿದೆ.
ಬೆಂಗಳೂರಿನ 35 ಕಡೆಗಳಲ್ಲಿ ಯುದ್ಧದ ಎಚ್ಚರಿಕೆಯ ಸೈರನ್ ಕಾರ್ಯನಿರ್ವಹಿಸಲಿದ್ದು, ಈ ಪೈಕಿ 32 ಕಡೆಗಳಲ್ಲಿ ಅಣುಕು ಕವಾಯತು ನಡೆಯಲಿದೆ. ಈ ಸಂದರ್ಭದಲ್ಲಿ ಆಯಾ ಸ್ಥಳಗಳಲ್ಲಿ ಎನ್ಸಿಸಿ, ಎನ್ಎಸ್ಎಸ್, ಸಿವಿಲ್ ಡಿಫೈನ್ಸ್, ವೈದ್ಯರು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಭಾಗಿಯಾಗುತ್ತಾರೆ. ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆಗಳ ಮೇಲೆ ಸೈರನ್ ಕಾರ್ಯ ನಿರ್ವಹಿಸಲಿದೆ ಎಂದು ಅಗ್ನಿಶಾಮಕ ದಳ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್, ಸಿಕ್ಯುಎಎಲ್, ಇಎಸ್ಐ ಆಸ್ಪತ್ರೆ, ಎನ್ಎಎಲ್, ಬೆಂಗಳೂರು ಡೈರಿ, ಕೆನರಾ ಬ್ಯಾಂಕ್, ಎಸ್ಆರ್ ಎಸ್ ಪೀಣ್ಯ, ವಿ.ವಿ.ಟವರ್ ಅಗ್ನಿಶಾಮಕ ಠಾಣೆ, ಜ್ಞಾನಭಾರತಿ ಅಗ್ನಿಶಾಮಕ ಠಾಣೆ, ಥಣಿಸಂದ್ರ ಅಗ್ನಿಶಾಮಕ ಠಾಣೆ, ಬಾಣಸವಾಡಿ ಅಗ್ನಿಶಾಮಕ ಠಾಣೆ, ಯಶವಂತಪುರ ಅಗ್ನಿಶಾಮಕ ಠಾಣೆ, ಬನಶಂಕರಿ ಅಗ್ನಿಶಾಮಕ ಠಾಣೆ, ರಾಜಾಜಿನಗರ ಅಗ್ನಿಶಾಮಕ ಠಾಣೆ, ಚಾಮರಾಜಪೇಟೆ ಅಗ್ನಿಶಾಮಕ ಠಾಣೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ, ಹಲಸೂರು ಗೇಟ್ ಠಾಣೆ, ಹಲಸೂರು ಪೊಲೀಸ್ ಠಾಣೆಗಳಲ್ಲಿ ಅಣಕು ಕವಾಯತು ನಡೆಯಲಿದೆ.
ಉಪ್ಪಾರಪೇಟೆ ಪೊಲೀಸ್ ಠಾಣೆ, ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ, ಕಾಮಾಕ್ಷಿಪಾಳ್ಯ ಠಾಣೆ, ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆ, ವೈಯಾಲಿಕಾವಲ್ ಪೊಲೀಸ್ ಠಾಣೆ, ಹಲಸೂರು ಗೃಹರಕ್ಷಕದಳ ಕೇಂದ್ರ ಕಚೇರಿ, ಪೀಣ್ಯ ಅಗ್ನಿಶಾಮಕ ಠಾಣೆ, ಬೆಂಗಳೂರು ಗ್ರಾಮಾಂತರ ಗೃಹರಕ್ಷಕದಳ ಕಚೇರಿ, ಬಾಗಲೂರು ಅಗ್ನಿಶಾಮಕ ಠಾಣೆ, ಅಂಜನಾಪುರ ಅಗ್ನಿಶಾಮಕ ಠಾಣೆ, ಐಟಿಪಿಎಲ್ ಅಗ್ನಿಶಾಮಕ ಠಾಣೆ, ಸರ್ಜಾಪುರ ಅಗ್ನಿಶಾಮಕ ಠಾಣೆ, ಎಲೆಕ್ಟ್ರಾನಿಕ್ ಅಗ್ನಿಶಾಮಕ ಠಾಣೆ ಮತ್ತು ಡೈರಿ ಸರ್ಕಲ್ ಅಗ್ನಿಶಾಮಕ ಠಾಣೆಗಳಲ್ಲಿ ಅಣಕು ಕವಾಯತು ನಡೆಯಲಿದೆ ಎಂದು ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ವಿವರಿಸಿದ್ದಾರೆ.
ಅಣಕು ಕವಾಯತಿನ ಅಡಿಯಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್ಗಳನ್ನು ನಿರ್ವಹಿಸಲಾಗುತ್ತದೆ. ಇದು ಅಪಾಯ ಮತ್ತು ಶತ್ರು ಚಟುವಟಿಕೆಗಳ ಕುರಿತು ಎಚ್ಚರಿಕೆಯನ್ನು ನೀಡುವುದಕ್ಕೆ ಸಂಬಂಧಿಸಿದ ಒಂದು ಹಂತವಾಗಿದೆ. ಅಣಕು ಕವಾಯತು ನಡೆಯುವ ವೇಳೆಯಲ್ಲಿ ಮೂರು ಹಂತದಲ್ಲಿ ಸೈರನ್ ಹಾಕಲಾಗುತ್ತದೆ. ಈ ಸೈರನ್ ಸಹ ಮೂರು ರೀತಿಯ ಶಬ್ದ ಮಾಡುತ್ತದೆ. ಇದರ ಶಬ್ದವು ಸುಮಾರು 3 ಕಿ.ಮೀ. ವ್ಯಾಪ್ತಿಯವವರೆಗೂ ಕೇಳುತ್ತದೆ ಎಂದು ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಮಾಹಿತಿ ನೀಡಿದ್ದಾರೆ.







