ಸುಳ್ಳು ಪ್ರಚಾರ ಬಿಟ್ಟು ಮೋದಿ ಸರಕಾರ ಜನರಿಗೆ ಸತ್ಯ ಹೇಳಲಿ: ಬಿ.ಕೆ. ಹರಿಪ್ರಸಾದ್
"ಸತ್ಯಕ್ಕೆ ಶಕ್ತಿ ಹೆಚ್ಚು ಅನ್ನೋದಕ್ಕೆ ʼಆಪರೇಷನ್ ಸಿಂಧೂರʼ ಬಗ್ಗೆ ಹೊರಬೀಳುತ್ತಿರುವ ಘಟನೆಗಳೇ ಸಾಕ್ಷಿ"

ಬಿ.ಕೆ. ಹರಿಪ್ರಸಾದ್
ಬೆಂಗಳೂರು: ಆಪರೇಷನ್ ಸಿಂಧೂರದ ಬಗ್ಗೆ ಪಾಕಿಸ್ತಾನಕ್ಕೆ ಮೊದಲೇ ಮಾಹಿತಿ ನೀಡಿದ್ದಕ್ಕೆ ಏನೇನೆಲ್ಲಾ ಅನಾಹುತ ಸಂಭವಿಸಿದೆ ಎಂಬ ಸತ್ಯವನ್ನು ರಕ್ಷಣಾ ಪಡೆಗಳ ಮುಖ್ಯಸ್ಥರು ಒಪ್ಪಿದ್ದಾರೆ. ಈಗಲಾದರೂ ಸುಳ್ಳು ಪ್ರಚಾರ ಬಿಟ್ಟು ಪ್ರಧಾನಿ ಮೋದಿ ಸರಕಾರ ಜನರಿಗೆ ಸತ್ಯ ಹೇಳಲಿ ಎಂದು ವಿಧಾನ ಪರಿಷತ್ತಿನ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ರವಿವಾರ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸುಳ್ಳಿಗೆ ಪ್ರಚಾರದ ಹುಚ್ಚಿರುತ್ತದೆ. ಆದರೆ ಸತ್ಯಕ್ಕೆ ಮಾತ್ರ ಶಕ್ತಿ ಹೆಚ್ಚಿರುತ್ತೆ ಎನ್ನೋದಕ್ಕೆ ಆಪರೇಷನ್ ಸಿಂಧೂರ ಬಗ್ಗೆ ಹೊರಬೀಳುತ್ತಿರುವ ಘಟನೆಗಳೇ ಸಾಕ್ಷಿ. ಪಾಕಿಸ್ತಾನಿ ಉಗ್ರರನ್ನು ಹುಟ್ಟಡಗಿಸಿದ ನಮ್ಮ ಸೈನ್ಯದ ಪರಾಕ್ರಮದ ಬಗ್ಗೆ ಹಾಗೂ ಆಪರೇಷನ್ ಸಿಂಧೂರದ ಯಶಸ್ಸಿನ ಬಗ್ಗೆ ದೇಶ ಹೆಮ್ಮೆಪಟ್ಟಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಹಾಗೂ ನಮ್ಮ ನಾಯಕರು, ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಸೇನಾಪಡೆಯ ಸಾಹಸ ಹಾಗೂ ದಿಟ್ಟತನವನ್ನು ಪ್ರಶಂಸಿಸುತ್ತಲೇ, ಸೈನ್ಯಕ್ಕಾದ ಹಾನಿ ಹಾಗೂ ನಷ್ಟದ ಬಗ್ಗೆ ದೇಶದ ಜನರೆದುರು ವಾಸ್ತವ ತೆರೆದಿಡಿ ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು.ಆದರೆ, ಸತ್ಯವನ್ನು ಮರೆಮಾಚುವ ಉದ್ದೇಶದಿಂದ ಪ್ರಧಾನಿ ಮೋದಿ ಸರಕಾರ ರಾಹುಲ್ ಗಾಂಧಿ ಪ್ರಶ್ನೆಗೆ ಉತ್ತರಿಸದೆ, ಮೊಂಡುವಾದ ಮಾಡುತ್ತಾ, ಹೀಯಾಳಿಸುತ್ತಾ, ನಿಂದಿಸುತ್ತಾ, ಕಾಲ ಹರಣ ಮಾಡಿತು ಎಂದು ಅವರು ಟೀಕಿಸಿದ್ದಾರೆ.
ಈಗ ದೇಶದ ಮೂರು ರಕ್ಷಣಾಪಡೆಗಳ ಮುಖ್ಯಸ್ಥರಾದ ಅನಿಲ್ ಚೌಹಾಣ್ ಅವರೇ ವಾಸ್ತವವನ್ನು ಒಪ್ಪಿಕೊಂಡಿದ್ದಾರೆ. ಯುದ್ಧ ವಿಮಾನ ಕಳೆದುಕೊಂಡಿರುವ ಸತ್ಯವೂ ಸೇರಿದಂತೆ ಆಪರೇಷನ್ ಸಿಂಧೂರದ ಸಮಯದಲ್ಲಿ ಆಗಿರುವ ನಷ್ಟದ ಬಗ್ಗೆ ಮಾತಾಡಿದ್ದಾರೆ. ಆದರೆ ಸುಳ್ಳು ಪ್ರಚಾರವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥಸಿಂಗ್ ಮೌನವಹಿಸಿದ್ದು ಏಕೆ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
"ಸುಳ್ಳಿಗೆ ಪ್ರಚಾರದ ಹುಚ್ಚಿರುತ್ತದೆ ಆದರೆ ಸತ್ಯಕ್ಕೆ ಮಾತ್ರ ಶಕ್ತಿ ಹೆಚ್ಚಿರುತ್ತೆ" ಅನ್ನೋದಕ್ಕೆ "ಆಪರೇಷನ್ ಸಿಂಧೂರ" ಬಗ್ಗೆ ಹೊರಬೀಳುತ್ತಿರುವ ಘಟನೆಗಳೇ ಸಾಕ್ಷಿ. ಪಾಕಿಸ್ತಾನಿ ಉಗ್ರರನ್ನ ಹುಟ್ಟಗಡಿಸಿದ ನಮ್ಮ ಸೈನ್ಯದ ಪರಾಕ್ರಮದ ಬಗ್ಗೆ ಹಾಗೂ ಆಪರೇಷನ್ ಸಿಂಧೂರದ ಯಶಸ್ಸಿನ ಬಗ್ಗೆ ದೇಶ ಹೆಮ್ಮೆ ಪಟ್ಟಿದೆ.
— Hariprasad.B.K. (@HariprasadBK2) June 1, 2025
ಕಾಂಗ್ರೆಸ್ ಪಕ್ಷ ಹಾಗೂ ನಮ್ಮ… pic.twitter.com/fyHVfatnlX







