ಅಕ್ರಮ ಹಣ ವರ್ಗಾವಣೆ ಪ್ರಕರಣ : ಶಾಸಕ ವೀರೇಂದ್ರ ಪಪ್ಪಿ ಮತ್ತೆ 6 ದಿನ ಈ.ಡಿ. ವಶಕ್ಕೆ

ಬೆಂಗಳೂರು, ಆ.28 : ಅಕ್ರಮ ಹಣ ವರ್ಗಾವಣೆ ಹಾಗೂ ಆನ್‍ಲೈನ್ ಗೇಮಿಂಗ್ ಆ್ಯಪ್‍ಗಳಿಗೆ ಹಣ ಪೂರೈಕೆ ಆರೋಪದಡಿ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಮತ್ತೆ 6 ದಿನಗಳವರೆಗೆ ಜಾರಿ ನಿರ್ದೇಶನಾಲಯ(ಈ.ಡಿ.)ದ ಅಧಿಕಾರಿಗಳ ವಶಕ್ಕೆ ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಆದೇಶಿಸಿದೆ.
ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆ ಆ.28ರಂದು ಬೆಂಗಳೂರಿನ ಶಾಂತಿನಗರದಲ್ಲಿರುವ ಈ.ಡಿ. ಕಚೇರಿಯಿಂದ ವೀರೇಂದ್ರ ಪಪ್ಪಿ ಅವರನ್ನು ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಅಕ್ರಮ ಹಣ ವರ್ಗಾವಣೆ ಹಾಗೂ ಆನ್‍ಲೈನ್ ಗೇಮಿಂಗ್ ಆ್ಯಪ್‍ಗಳಿಗೆ ಹಣ ಪೂರೈಕೆ ಪ್ರಕರಣ ಸಂಬಂಧ ವಕೀಲರ ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಶಾಸಕ ಪಪ್ಪಿ ಅವರ ಕಸ್ಟಡಿ ವಿಸ್ತರಣೆ ಮಾಡಿ ಆದೇಶಿಸಿದರು.
ಅಲ್ಲದೇ, ಪಪ್ಪಿ ಅವರಿಗೆ 24 ಗಂಟೆಗಳಿಗೊಮ್ಮೆ ವೈದ್ಯಕೀಯ ತಪಾಸಣೆ ಮಾಡಿಸಬೇಕು. ಇದರೊಂದಿಗೆ ಶುದ್ಧವಾದ ಆಹಾರ, ನೀರು, ಅಗತ್ಯ ಓಷಧಿಗಳನ್ನು ನೀಡಬೇಕು. ಆರೋಪಿಗೆ ಸ್ವಲ್ಪ ವಿಶ್ರಾಂತಿ ಕೊಟ್ಟು ವಿಚಾರಣೆ ಮಾಡಬೇಕು. ಪ್ರತಿ ದಿನ 30 ನಿಮಿಷಗಳ ಕಾಲ ವಕೀಲರ ಭೇಟಿಗೆ ಅವಕಾಶ ನೀಡಬೇಕು, ರಾತ್ರಿ 9 ಗಂಟೆ ನಂತರ ವಿಚಾರಣೆ ನಡೆಸಬಾರದು ಎಂದು ನ್ಯಾಯಾಧೀಶಕರು ಈ.ಡಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ.ಡಿ. ಪರ ವಕೀಲ ಪ್ರಮೋದ್ ಚಂದ್ರ ವಾದ ಮಂಡಿಸಿದರೆ, ಆರೋಪಿ ವೀರೇಂದ್ರ ಪಪ್ಪಿ ಪರ ಹಿರಿಯ ವಕೀಲ ಕಿರಣ್ ಜವಳಿ ಹಾಗೂ ಚಂದ್ರಮೌಳಿ ವಾದ ಮಂಡಿಸಿದರು.
ಏನಿದು ಪ್ರಕರಣ?:
ಆನ್‍ಲೈನ್ ಗೇಮಿಂಗ್ ಆ್ಯಪ್‍ಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ, ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಆರೋಪ ಶಾಸಕ ವೀರೇಂದ್ರ ಪಪ್ಪಿ ವಿರುದ್ಧ ಕೇಳಿಬಂದಿತ್ತು. ಈ ಕುರಿತು ಗೋವಾದಲ್ಲಿ 2 ಪ್ರಕರಣ ದಾಖಲಾಗಿತ್ತು. ಈ ಸಂಬಂಧವಾಗಿ ಈ.ಡಿ. ಶೋಧ ನಡೆಸಿ ನಗದು, ಚಿನ್ನಾಭರಣ ವಶಪಡಿಸಿಕೊಂಡು ಸಿಕ್ಕಿಂನಲ್ಲಿ ಪಪ್ಪಿ ಅವರನ್ನು ಬಂಧಿಸಿತ್ತು.







