ಮುಂಗಾರು ಅಧಿವೇಶನ | ಬೀದಿನಾಯಿಗಳ ಹಾವಳಿ ತಡೆಗಟ್ಟಿ : ಪ್ರತಿಪಕ್ಷ ಸದಸ್ಯರ ಒತ್ತಾಯ

ಬೆಂಗಳೂರು, ಆ. 13: ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುತ್ತಿರುವ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಹೊಸದಿಲ್ಲಿ ಮಾದರಿಯಲ್ಲೇ ರಾಜ್ಯದಲ್ಲೂ ಸುಪ್ರೀಂ ಕೋರ್ಟ್ ತೀರ್ಪಿನ್ನು ಅನುಸರಿಸಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಒತ್ತಾಯಿಸಿದರು.
ಬುಧವಾರ ಪ್ರಶ್ನೋತ್ತರ ಕಲಾಪದ ಬಳಿಕ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ನಾಯಕ ಸುರೇಶ್ ಬಾಬು, ‘ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್ ಮೂರು ನಗರಗಳಿಗೆ ಸೀಮಿತವಾಗಿ ತೀರ್ಪು ನೀಡಿದೆ. ಅದನ್ನು ನಮ್ಮ ರಾಜ್ಯ ಸರಕಾರವು ಅಳವಡಿಸಿಕೊಳ್ಳಬೇಕು. ರಾಜಧಾನಿ ಬೆಂಗಳೂರು ಸೇರಿದಂತೆ ಇತರ ಕಡೆಗಳಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕು’ ಎಂದು ಕೋರಿದರು.
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಎಸ್.ಸುರೇಶ್ ಕುಮಾರ್, ಬೆಂಗಳೂರು ನಗರದಲ್ಲೆ ಒಟ್ಟು 18 ಮಂದಿ ಮಾರಕ ರೇಬಿಸ್ ಕಾಯಿಲೆಗೆ ತುತ್ತಾಗಿದ್ದಾರೆ. 2ಲಕ್ಷಕ್ಕೂ ಅಧಿಕ ಮಂದಿಗೆ ಬೀದಿ ಶ್ವಾನಗಳ ಕಡಿತ ಆಗಿದೆ. ಹೀಗಾಗಿ ಶ್ವಾನಗಳ ನಿಯಂತ್ರಣಕ್ಕೆ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಾಯಿ ಪ್ರೇಮಿಗಳ ಮನೆಗೆ ಕೊಡಿ: ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಪ್ರಾಣಿ ಪ್ರಿಯರು ಆಕ್ಷೇಪಿಸಿದರೆ, ಎಲ್ಲ ಬೀದಿ ನಾಯಿಗಳನ್ನು ಅವರ ಮನೆಯ ಮುಂದೆ ಬಿಡೋಣ. ಆದರೆ, ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು. ಬೀದಿ ನಾಯಿಗಳಿಗೆ ಬಿರಿಯಾನಿ ಹಾಕುವುದನ್ನು ಬಿಟ್ಟು ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಡಾ.ಅಶ್ವತ್ಥ ನಾರಾಯಣ್ ಆಗ್ರಹಿಸಿದರು.
ಬಿಜೆಪಿಯ ಸದಸ್ಯ ಉಮಾನಾಥ್ ಕೋಟ್ಯಾನ್, ‘ಶಾಸಕರ ಭವನದಲ್ಲೂ ಬೀದಿ ನಾಯಿಗಳ ಹಾವಳಿ ಇದೆ. ನಾವು ನಮ್ಮ ಕೊಠಡಿಗಳಿಂದ ಹೊರಬರಲಾಗುತ್ತಿಲ್ಲ. ಇದು ಸ್ಪೀಕರ್ ವ್ಯಾಪ್ತಿಯ ಪ್ರದೇಶವಾಗಿರುವುದರಿಂದ ಬೀದಿ ನಾಯಿಗಳನ್ನು ಹತ್ತಿಕ್ಕಬೇಕು’ ಎಂದು ಮನವಿ ಮಾಡಿದರು.
‘ಶಾಸಕರ ಭವನದಲ್ಲಿ ನಾಯಿಗಳು ಇರಬೇಕೇ ಬೇಡವೇ? ಎಂದು ಸ್ಪೀಕರ್ ಖಾದರ್ ಪ್ರಶ್ನಿಸಿದ್ದರು. ಶಾಸಕರ ಭವನದಲ್ಲಿ ಬೀದಿ ನಾಯಿಗಳು ಇದಿರುವುದು ಬೇಡ ಎಂದು ಸದಸ್ಯರು ಸಲಹೆ ನೀಡಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ‘ಬೀದಿ ನಾಯಿಗಳನ್ನು ಓಡಿಸಲು ಸುಪ್ರೀಂ ಕೋರ್ಟಿನ ತೀರ್ಪು ಬೇಕಾಗಿದೆ’ ಎಂದು ಚರ್ಚೆಗೆ ತೆರೆ ಎಳೆದರು.







