ಎರಡು ತಿಂಗಳೊಳಗೆ ಸಮುದ್ರದ ಆ್ಯಂಬುಲೆನ್ಸ್ ಕಾರ್ಯಾಚರಣೆ!

ಸಾಂದರ್ಭಿಕ ಚಿತ್ರ | PC : Meta AI
ಬೆಂಗಳೂರು, ಆ.13: ಅಪಾಯ ಸಂದರ್ಭಗಳಲ್ಲಿ ಮೀನುಗಾರರನ್ನು ರಕ್ಷಿಸಲು ರಾಜ್ಯ ಸರಕಾರವು ಸಮುದ್ರದ ಆ್ಯಂಬುಲೆನ್ಸ್ ಖರೀದಿಗೆ ಟೆಂಡರ್ ಕಾರ್ಯ ಮುಗಿದಿದ್ದು, ಮುಂದಿನ ಎರಡು ತಿಂಗಳೊಳಗೆ ಕಾರ್ಯನಿರ್ವಹಣೆ ಮಾಡಲಿದೆ ಎಂದು ಮೀನುಗಾರಿಕೆ ಇಲಾಖೆ ಸಚಿವ ಮಂಕಾಳ ಎಸ್.ವೈದ್ಯ ತಿಳಿಸಿದ್ದಾರೆ.
ಬುಧವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮುದ್ರಕ್ಕೆ ತೆರಳಿದಾಗ ಮೀನುಗಾರಿಗೆ ಅನಾರೋಗ್ಯ ಅಥವಾ ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ತ್ವರಿತವಾಗಿ ರಕ್ಷಿಸಲು ಸಮುದ್ರದ ಆ್ಯಂಬುಲೆನ್ಸ್ ಖರೀದಿಗೆ ಸರಕಾರ ಅನುಮತಿ ನೀಡಿದೆ. ಈಗಾಗಲೇ ಖರೀದಿ ಟೆಂಡರ್ ಕಾರ್ಯ ಮುಗಿಸಿದ್ದು ಇನ್ನೆರಡು ತಿಂಗಳಲ್ಲಿ ಮೂರು ಆ್ಯಂಬುಲೆನ್ಸ್ ಕಾರ್ಯಾಚರಣೆ ಮಾಡಲಿವೆ. ಕರಾವಳಿಯ ಮೂರು ಜಿಲ್ಲೆಗಳಿಗೂ ಒಂದೊಂದು ಆ್ಯಂಬುಲೆನ್ಸ್ ನೀಡಲಾಗುವುದು ಎಂದರು.
ಮೀನುಗಾರಿಕೆಗೆ ತೆರಳುವ ದೋಣಿಗಳಲ್ಲಿ ಮೀನುಗಾರರಿಗೆ ಜೀವರಕ್ಷಕ ಸಾಧನವಾದ ಲೈಫ್ ಜಾಕೆಟ್ ಅನ್ನು ಸರಕಾರವೇ ನೀಡಲು ನಿರ್ಧರಿಸಿದೆ. ಮೀನುಗಾರರ ಸುರಕ್ಷತೆಗೆ ಅವರ ದೋಣಿಗಳಲ್ಲಿ ಜಿಪಿಎಸ್ ಅಳವಡಿಸಿದೆ. ಒಂದು ವೇಳೆ ಸಮುದ್ರದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ ಮೀನುಗಾರರು ಸಾವನ್ನಪ್ಪಿದರೆ ಮೃತರ ಕುಟುಂಬಗಳಿಗೆ 6 ಲಕ್ಷದಿಂದ 10 ಲಕ್ಷಕ್ಕೆ ಪರಿಹಾರ ಹೆಚ್ಚಿಸಲಾಗಿದೆ ಎಂದು ಮಂಕಾಳ ವೈದ್ಯ ಹೇಳಿದರು.
29 ಮೀನುಗಾರರ ಕುಟುಂಬಸ್ಥರಿಗೆ ಪರಿಹಾರ: ಈ ಹಿಂದೆ ಮೃತದೇಹ ಪತ್ತೆಯಾದರೆ ಮಾತ್ರ ಪರಿಹಾರ ನೀಡುವ ಸಂಪ್ರದಾಯವಿತ್ತು. ಒಂದು ವೇಳೆ ಪರಿಹಾರ ಪಡೆಯಬೇಕಾದರೆ ಏಳು ವರ್ಷಗಳವರೆಗೆ ಕಾಯಬೇಕಿತ್ತು. ಮೃತರ ಅವಲಂಬಿತರಿಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕಾಗಿ ಪರಿಹಾರ ಕೊಡಲು ಮುಂದಾಗಿದ್ದೇವೆ. ಸದ್ಯದಲ್ಲೇ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ 29 ಮೀನುಗಾರರ ಕುಟುಂಬಸ್ಥರಿಗೆ ಪರಿಹಾರ ನೀಡಲಿದ್ದೇವೆ ಎಂದು ಮಂಕಾಳ ವೈದ್ಯ ತಿಳಿಸಿದರು.







