ಮುಂಗಾರು ಅಧಿವೇಶನ | ವಿಧಾನ ಪರಿಷತ್ತಿನಲ್ಲಿ ಕೋಮುಗಲಭೆ ಬಗ್ಗೆ ಗಂಭೀರ ಚರ್ಚೆ

ಬೆಂಗಳೂರು, ಆ.14: ಗುರುವಾರದಂದು ವಿಧಾನ ಪರಿಷತ್ತಿನಲ್ಲಿ ರಾಜ್ಯಾದ್ಯಂತ ಹೆಚ್ಚುತ್ತಿರುವ ಕೋಮುಗಲಭೆ ಹಾಗೂ ಅದರಿಂದ ಸಮಾಜದಲ್ಲಿ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಗಂಭೀರ ಸ್ವರೂಪದ ಚರ್ಚೆ ನಡೆಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರ್ ಕೋಮುಗಲಭೆ ಬಗ್ಗೆ ಸರಕಾರದ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರ ನೀಡಿದರು.
ಈ ವೇಳೆ ಗೃಹಸಚಿವರ ಉತ್ತರಕ್ಕೆ ತೃಪ್ತರಾಗದ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು, ಸೌಹಾರ್ದ ವಾತಾವರಣ ಹದಗೆಡಿಸುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸದಸ್ಯ ಕಿಶೋರ್ ಕುಮಾರ್ ಮಾತನಾಡಿ, ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ಸುಹಾಸ್ ಶೆಟ್ಟಿ ಕೊಲೆಯಾಯಿತು. ಆದರೆ ಸಚಿವರು ಕೊಲೆಯಾದವರ ಮನೆಗೆ ಮನೆಗೆ ಹೋಗಲಿಲ್ಲ. ಅವರ ತಂದೆತಾಯಿಗಳನ್ನು, ಸಂಬಂಧಿಕರನ್ನು ಭೇಟಿಯಾಗಿ ಸ್ವಾಂತನವನ್ನು ಹೇಳಿಲ್ಲ. ಆದರೆ ಕೆಲ ದಿನಗಳ ಹಿಂದೆ ಬೇರೇ ಸಮುದಾಯದ ವ್ಯಕ್ತಿಯೊಬ್ಬ ಮೃತಪಟ್ಟಾಗ ಅಲ್ಲಿ ಹೋಗಿ ಬಂದಿದ್ದೀರಿ. ನೀವು ಯಾವುದೋ ಜಾತಿ ಅಥವಾ ಧರ್ಮಕ್ಕೆ ಸೀಮಿತರಾದ ಸಚಿವರಲ್ಲ. ಆರು ಕೋಟಿ ಕನ್ನಡಿಗರ ಗೃಹಸಚಿವರು. ಪ್ರತಿಯೊಬ್ಬರ ರಕ್ಷಣೆ ನಿಮ್ಮ ಕರ್ತವ್ಯ ಎಂದು ಹೇಳಿದರು.
ಕಾಂಗ್ರೆಸ್‍ನ ಸದಸ್ಯ ಐವಾನ್ ಡಿಸೋಜ ಮಾತನಾಡಿ, ಕರಾವಳಿಯಲ್ಲಿ ನಡೆಯುತ್ತಿರುವ ಕೋಮುಗಲಭೆಗೆ ಯಾರು ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ. ಗೃಹಸಚಿವರು ತಾರತಮ್ಯ ಮಾಡದೆ ಕ್ರಮ ಕೈಗೊಂಡಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.
ಪ್ರವೀಣ್ ನೆಟ್ಟಾರು ಕೊಲೆಯಾದಾಗ ಅಂದಿನ ಮುಖ್ಯಮಂತ್ರಿಗಳು ಕೊಲೆಯಾದವರ ಮನೆಗೆ ಹೋಗಿ ಕುಟುಂಬಕ್ಕೆ ಸಾಂತ್ವಾನ ಹೇಳಿ 50 ಲಕ್ಷ ರೂ.ಗಳನ್ನು ನೀಡಿದ್ದಾರೆ. ಅದೇ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರ ಕೊಲೆಯಾಯಿತು. ಅವರ ಮನೆಗೆ ಏಕೆ ಹೋಗಲಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‍ನ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ರೌಡಿಶೀಟರ್ ಹಿನ್ನೆಲೆಯುಳ್ಳ ವ್ಯಕ್ತಿ ಸತ್ತರೆ ಅಥವಾ ಅನ್ಯ ಕಾರಣಗಳಿಂದ ಕೊಲೆಯಾದರೆ ಗೃಹಸಚಿವರು ಅಲ್ಲಿಗೆ ಹೋಗಬೇಕೆ ಎಂದು ಪ್ರಶ್ನೆ ಮಾಡಿದರು.
‘ಮಂಗಳೂರಿನಲ್ಲಿ ಅಬ್ದುಲ್ ರೆಹಮಾನ್ ಎಂಬುವವರನ್ನು ಕೋಲೆ ಮಾಡಿ, ರೆಹಮಾನ್ ತಂದೆ-ತಾಯಿಗೆ ರಕ್ತವನ್ನು ಕೊಟ್ಟಿದ್ದಾರೆ. ರೆವೆಂಜ್ ಕಿಲ್ಲಿಂಗ್‍ನಲ್ಲಿ ಯಾರು ಸಿಕ್ಕಿಲ್ಲ ಎಂದು ಹೇಳಿ, ರೆಹಮಾನ್‍ನನ್ನು ಕರೆಸಿ, ಕೊಂದು ವಿಶ್ವಾಸಘಾತುಕ ಕೆಲಸವನ್ನು ಮಾಡಿದ್ದಾರೆ. ಇಂತಹ ಘಟನೆ ರಾಜ್ಯದಲ್ಲಿ ನಡೆದಿರಲಿಲ್ಲ. ಸಚಿವರು ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ತೆಗೆದುಕೊಳ್ಳಬೇಕು’
-ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್‍ನ ಸದಸ್ಯ







