ಕರ್ನಾಟಕ ಬಂದರುಗಳ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಒಪ್ಪಿಗೆ

ಬೆಂಗಳೂರು, ಆ. 19 : ಕರ್ನಾಟಕ ಬಂದರುಗಳ (ಸರಕನ್ನು ಹಡಗಿನಿಂದ ಇಳಿಸುವ ಮತ್ತು ಹಡಗಿಗೆ ತುಂಬುವ ಶುಲ್ಕಗಳು) ತಿದ್ದುಪಡಿ ವಿಧೇಯಕ-2025ಕ್ಕೆ ವಿಧಾನಸಭೆಯಲ್ಲಿ ಧ್ವನಿಮತದ ಅಂಗೀಕಾರ ನೀಡಲಾಯಿತು.
ಮಂಗಳವಾರ ಶಾಸನ ರಚನಾ ಕಲಾಪದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಅವರು ವಿಧೇಯಕವನ್ನು ಮಂಡಿಸಿದರು. ಬಳಿಕ ವಿವರಣೆ ನೀಡಿದ ಅವರು, ಸರಕನ್ನು ಹಡಗಿನಿಂದ ಇಳಿಸುವ ಮತ್ತು ಹಡಗಿಗೆ ತುಂಬುವ ಫೀಜು(ಶುಲ್ಕ)ಗಳನ್ನು ಮೂರು ವರ್ಷಕ್ಕೊಮೆ ಪರಿಷ್ಕರಣೆ ಮಾಡಲು ಈ ವಿಧೇಯಕ ಅವಕಾಶ ಕಲ್ಪಿಸಲಾಗಿದೆ.
ಇದೀಗ ಒಂದೊಂದು ಬಂದರಿನಲ್ಲಿ ಒಂದೊಂದು ದರ ವಿಧಿಸಲಾಗುತ್ತಿದೆ. ಆ ಕಾರಣಕ್ಕಾಗಿ ಈ ತಿದ್ದುಪಡಿ ಅಗತ್ಯವಿತ್ತು. ಮಧ್ಯಂತರದ ಅವಧಿಯಲ್ಲಿ ಹಡಗಿಗೆ ತುಂಬಿದ ಶುಲ್ಕಗಳನ್ನು ಪರಿಷ್ಕರಿಸುವುದು ಮತ್ತು ಅವಧಿಯೊಳಗೆ ಶುಲ್ಕಗಳನ್ನು ಪರಿಷ್ಕರಿಸದಿದ್ದರೆ ಸರಕಾರವು ಅಧಿಸೂಚನೆ ಮೂಲಕ ಶೇಕಡಾವಾರು ಶುಲ್ಕಗಳನ್ನು ಹೆಚ್ಚಿಸುವುದು ಮತ್ತು ಕಡಿಮೆ ಮಾಡಲು ಈ ವಿಧೇಯಕವು ಅವಕಾಶ ನೀಡುತ್ತದೆ ಎಂದು ತಿಳಿಸಿದರು. ಆ ಬಳಿಕ ಸ್ಪೀಕರ್ ಯು.ಟಿ.ಖಾದರ್ ಅವರು ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು.







