ವಿಧಾನಸಭೆ | ‘ಗಿಗ್ ಕಾರ್ಮಿಕರ’ ಸಾಮಾಜಿಕ ಭದ್ರತೆ-ಕ್ಷೇಮಾಭಿವೃದ್ಧಿ ವಿಧೇಯಕಕ್ಕೆ ಅಸ್ತು

ಬೆಂಗಳೂರು, ಆ. 19 : ‘ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ, ವೃತ್ತಿಜನ್ಯ ಆರೋಗ್ಯ ಮತ್ತು ಸುರಕ್ಷತೆಗೆ ಒತ್ತು ನೀಡುವ ‘ಕರ್ನಾಟಕ ವೇದಿಕೆ ಆಧರಿತ ಗಿಗ್ ಕಾರ್ಮಿಕರ(ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕ-2025ಕ್ಕೆ ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆಯೊಂದಿಗೆ ಅನುಮೋದನೆ ನೀಡಲಾಯಿತು.
ಮಂಗಳವಾರ ವಿಧಾನಸಭೆ ಶಾಸನ ರಚನೆ ಕಲಾಪದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಧೇಯಕವನ್ನು ಮಂಡಿಸಿದರು. ಬಳಿಕ ವಿವರಣೆ ನೀಡಿದ ಅವರು, ಡಿಜಿಟಲ್ ವೇದಿಕೆಯಲ್ಲಿ ಕೆಲಸ ಮಾಡುವವರು ಗಿಗ್ ಕಾರ್ಮಿಕರಾಗಿರುತ್ತಾರೆ. ಆಹಾರ ಪದಾರ್ಥಗಳು, ಇ-ಮಾರ್ಕೆಟ್, ವೃತ್ತಿಪರ, ಸಾರಿಗೆ, ಆರೋಗ್ಯ ಸೇವೆಗಳನ್ನು ಒಳಗೊಳ್ಳುತ್ತದೆ. ಈ ಹೊಸ ಪರಿಕಲ್ಪನೆ ದೇಶದಲ್ಲಿ ಬಂದಿದೆ.
ವಿದೇಶಗಳಲ್ಲೂ ಇಂತಹ ಕಾಯಿದೆ ಈಗಾಗಲೇ ಜಾರಿಯಲ್ಲಿದೆ. ವರ್ಷದಿಂದ ವರ್ಷಕ್ಕೆ ಈ ಕಾಮರ್ಸ್ ವೇದಿಕೆ ಬೆಳೆಯುತ್ತಿದೆ. ನೀತಿ ಆಯೋಗದ ಪ್ರಕಾರ, 23.5ಮಿಲಿಯನ್ ಕಾರ್ಮಿಕರು ಇದರ ವ್ಯಾಪ್ತಿಗೆ ಒಳಪಡಲಿದ್ದಾರೆ. ಕರ್ನಾಟಕದಲ್ಲಿ 4 ಲಕ್ಷ ಮಂದಿ ಗಿಗ್ ಕಾರ್ಮಿಕರಿದ್ದಾರೆ. ಆ ಪೈಕಿ ದ್ವಿಚಕ್ರ ವಾಹನ, ರಿಕ್ಷಾ ಹಾಗೂ ಕಾರು ಸೇರಿದಂತೆ ಇನ್ನಿತರ ವಾಹನಗಳನ್ನು ಉಳ್ಳವರಿದ್ದಾರೆ.
ಗಿಗ್ ಕಾರ್ಮಿಕರು ನಗರ ಪ್ರದೇಶದಲ್ಲಿನ ಸಂಚಾರ ದಟ್ಟಣೆ, ವಾಯು ಮತ್ತು ಶಬ್ಧ ಮಾಲಿನ್ಯ ಇರುವ ಕಡೆಗಳಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ಮಾಲಿನ್ಯದ ಹಿನ್ನೆಲೆಯಲ್ಲಿ ಓರ್ವ ಗಿಗ್ ಕಾರ್ಮಿಕ ಹತ್ತು ಸಿಗರೇಟ್ ಸೇದಿದಂತೆ ಆಗುತ್ತಿದ್ದು, ಆರೋಗ್ಯ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಹೀಗಾಗಿ ಅವರಿಗೆ ರಾಜ್ಯ ಸರಕಾರ 2ಲಕ್ಷ ರೂ.ವರೆಗೂ ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸಿದೆ. ಈಗಾಗಲೇ ಈ ಗಿಗ್ ವೇದಿಕೆಯಡಿ 10,560 ಮಂದಿ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಿವರಣೆ ನೀಡಿದರು.
ಡಿಜಿಟಲ್ ವೇದಿಕೆಯ ಸಂಗ್ರಹಗಾರರ ಮೇಲೆ ಹೊಣೆಗಾರಿಕೆಯನ್ನು ವಹಿಸಲು ಸ್ವಯಂ ಚಾಲಿತ ಮೇಲ್ವಿಚಾರಣೆ ಮತ್ತು ತೀರ್ಮಾನ ಕೈಗೊಳ್ಳುವ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ವಿಧೇಯಕ ತರಲಾಗಿದೆ. ಇದರಲ್ಲಿ ವಿವಾದ ಪರಿಹಾರ ವ್ಯವಸ್ಥೆ ಉಪಬಂಧಿಸುವುದು, ಕ್ಷೇಮಾಭಿವೃದ್ಧಿ ಮಂಡಳಿ ರಚಿಸುವುದು, ವೇದಿಕೆ ಆಧಾರಿತ ಗಿಗ್ ಕಾರ್ಮಿಕರಿಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವುದನ್ನು ಒಳಗೊಂಡಿದೆ ಎಂದು ಸಂತೋಷ್ ಲಾಡ್ ಹೇಳಿದರು.
ವೇದಿಕೆ ಆಧಾರಿತ ಗಿಗ್ ಕಾರ್ಮಿಕರು ಮಂಡಳಿಯಲ್ಲಿ ನೋಂದಾಯಿಸಲು ಉಪಬಂಧಿಸುವುದು, ಸಂಗ್ರಹಕಾರರು ಅಥವಾ ವೇದಿಕೆ ನೋಂದಣಿ ಮಾಡಿಸಲು ಉಪಬಂಧಿಸುವುದು ಮತ್ತು ಗಿಗ್ ಕಾರ್ಮಿಕರಿಗೆ ಆದಾಯ ಭದ್ರತೆ ಮತ್ತು ಸೂಕ್ತ ಕೆಲಸದ ಪರಿಸ್ಥಿತಿಗಳನ್ನು ಉಪಬಂಧಿಸುವುದು ಎಂದು ಅವರು ವಿವರಣೆ ನೀಡಿದರು.
ಆಡಳಿತ ಮತ್ತು ಪ್ರತಿಪಕ್ಷದ ಎಲ್ಲ ಸದಸ್ಯರು ‘ಗಿಗ್ ಕಾರ್ಮಿಕರ ವಿಧೇಯಕ’ವನ್ನು ಸ್ವಾಗತಿಸಿದರು. ಆ ಬಳಿಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ವಿಧೇಯಕವನ್ನು ಮತಕ್ಕೆ ಹಾಕಿದ ಸಂದರ್ಭದಲ್ಲಿ ಧ್ವನಿಮತದ ಅಂಗೀಕಾರ ದೊರೆಯಿತು.
‘ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ಯಾಂಗ್ ಮ್ಯಾನ್‍ಗಳು ಸಹಿತ ಅಸಂಘಟಿತ ಕಾರ್ಮಿಕರನ್ನು ‘ಗಿಗ್ ಕಾರ್ಮಿಕರ’ ವಿಧೇಯಕದ ವ್ಯಾಪ್ತಿಗೆ ತರಲು ಸಾಧ್ಯವಿಲ್ಲ. ಆದರೆ, ಹೊರಗುತ್ತಿಗೆ ಕಾರ್ಮಿಕರಿಗೆ ಸೂಕ್ತ ವೇತನ ನೀಡಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ, ಸೊಸೈಟಿಯ ಮೂಲಕ ನೀಡಲು ಕ್ರಮ ವಹಿಸಲಾಗುವುದು. 91 ವಿವಿಧ ಸಣ್ಣಪುಟ್ಟ ಕಸುಬುಗಳನ್ನು ಮಾಡುವ ಶೇ.90ರಷ್ಟು ಕಾರ್ಮಿಕರು ಇಲಾಖೆ ವ್ಯಾಪ್ತಿಗೆ ಬರಲಿದ್ದು, ಆ ಕಾರ್ಮಿಕರ ಹಿತರಕ್ಷಣೆಗೆ ಡಿಸೇಲ್, ಪೆಟ್ರೋಲ್ ಸೆಸ್ ನೀಡಲು ಮನವಿ ಮಾಡಲಾಗಿದೆ. ಹೀಗಾಗಿ ಅಸಂಘಟಿತ ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು’
-ಸಂತೋಷ್ ಲಾಡ್ ಕಾರ್ಮಿಕ ಸಚಿವ







