ವಿಧಾನಸಭೆ | ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ವಿಧೇಯಕಕ್ಕೆ (ಎಸ್ಮಾ) ಅನುಮೋದನೆ

ಬೆಂಗಳೂರು, ಆ. 19: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸೇರಿದಂತೆ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ನಡೆಸಿದರೆ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸುವ ‘ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ(ತಿದ್ದುಪಡಿ) ವಿಧೇಯಕ-2025(ಎಸ್ಮಾ) ಅನ್ನು 20 ವರ್ಷಗಳ ಅವಧಿಗೆ ವಿಸ್ತರಣೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ.
ಮಂಗಳವಾರ ವಿಧಾನಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ (ತಿದ್ದುಪಡಿ) ವಿಧೇಯಕ ಮಂಡಿಸಿದರು. ‘ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಕಾಯ್ದೆಗೆ ಹೊಸ ತಿದ್ದುಪಡಿಯನ್ನು ಸೇರ್ಪಡೆ ಮಾಡುವ ಮೂಲಕ ‘ಎಸ್ಮಾ’ ವಿಸ್ತರಿಸಲಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ನಿಗಮಗಳ ನೌಕರರು ಮುಷ್ಕರ ಮಾಡುವಂತಿಲ್ಲ. ಆ ಹಿನ್ನೆಲೆಯಲ್ಲೇ 2015ರಲ್ಲಿ ‘ಎಸ್ಮಾ’ ಹೇರುವ ಮೂಲಕ ಹೋರಾಟವನ್ನು ನಿರ್ಬಂಧಿಸಲಾಗಿತ್ತು. ಆಗಲೂ ನಾನೇ ಸಾರಿಗೆ ಸಚಿವನಾಗಿದ್ದೆ. ಆ ವೇಳೆ 10 ವರ್ಷಗಳ ಅವಧಿಗೆ ಹೇರಲಾಗಿದ್ದ ‘ಎಸ್ಮಾ’ ನಿಯಮಗಳನ್ನು 2021ರಲ್ಲಿ ಬಸವರಾಜ ಬೊಮ್ಮಾಯಿ ಸರಕಾರ ಬಳಸಿತ್ತು. ಇದನ್ನು ಹೊರತುಪಡಿಸಿದರೆ ‘ಎಸ್ಮಾ’ ಬಳಕೆ ಆಗಿಲ್ಲ.
2025ರ ಮೇ ತಿಂಗಳಲ್ಲಿ ‘ಎಸ್ಮಾ’ ಅವಧಿ ಮುಗಿದಿತ್ತು. ಆದ್ದರಿಂದ ಇದನ್ನು ಇನ್ನೂ ಇಪ್ಪತ್ತು ವರ್ಷಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ತಿದ್ದುಪಡಿಗೆ ವಿಧೇಯಕವನ್ನು ಮಂಡಿಸಲಾಗಿದೆ. ಹೀಗಾಗಿ ಈ ವಿಧೆಯಕಕ್ಕೆ ವಿಧಾನಸಭೆಯ ಎಲ್ಲ ಸದಸ್ಯರು ಅನುಮೋದನೆ ನೀಡಬೇಕು ಎಂದು ರಾಮಲಿಂಗಾರೆಡ್ಡಿ ಅವರು ಮನವಿ ಮಾಡಿದರು.
ವೇದಿಕೆ ಕಲ್ಪಿಸಿ: ಈ ವೇಳೆ ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಮಾತನಾಡಿ, ‘ನೌಕರರ ವಿರುದ್ದ ‘ಎಸ್ಮಾ’ ಜಾರಿ ಮಾಡಿ. ಆದರೆ, ಸಾರಿಗೆ ಸಂಸ್ಥೆಗಳ ನೌಕರರನ್ನು ಮುಷ್ಕರ ಮಾಡದಂತೆ ಹತ್ತಿಕ್ಕುವುದು ಒಂದು ಕಡೆಯಾದರೆ, ನೌಕರರು ಹಾಗೂ ಅಧಿಕಾರಿಗಳಿಗೆ ತಮ್ಮ ದೂರುಗಳನ್ನು ಹೇಳಿಕೊಳ್ಳಲು ವೇದಿಕೆ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.
ಬಳಿಕ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಸಿಎಂ ಜೊತೆ ನಾಲ್ಕು ಬಾರಿ ನಿಗಮಗಳ ವಿವಿಧ ಸಂಘಟನೆಗಳು ಚರ್ಚೆ ನಡೆಸಿವೆ. 1996ರಿಂದಲೂ ನಿಗಮಗಳ ಸಂಘಟನೆಗಳಿಗೆ ಚುನಾವಣೆ ನಡೆದಿಲ್ಲ. ಒಟ್ಟು 13 ಸಂಘಟನೆಗಳಿವೆ. ಚುನಾವಣೆ ನಡೆಸುವ ಅಗತ್ಯವಿದೆ ಎಂದರು. ಬಳಿಕ ಯಾವುದೇ ಚರ್ಚೆ ಇಲ್ಲದೆ ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು.







