Monsoon session | ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ

ಬೆಂಗಳೂರು : “ಸಾವಿನ ಯಜಮಾನ ಭಗವಂತ. ಈ ಜಗತ್ತಿಗೆ ತೋಟಗಾರ ಅವನು. ಇವತ್ತು ನಾವು ಆ ತೋಟದಲ್ಲಿ ನಮ್ಮ ನಮ್ಮ ಬೀಜಗಳನ್ನು ಬಿತ್ತಿ, ಪ್ರತಿಯೊಬ್ಬರ ಸ್ವಭಾವಕ್ಕೆ ತಕ್ಕಂತೆ ಬೆಳೆದು, ಕೊನೆಗೆ ಸಾವನ್ನು ಪಡೆದುಕೊಡು ಹೋಗುತ್ತಿದ್ದೇವೆ.”
ಗುರುವಾರ ಆರಂಭಗೊಂಡ ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಸಾವಿನ ಕುರಿತು ತಾತ್ಪರ್ಯ ನೀಡಿದ್ದು ಹೀಗೆ.
ವಿಧಾನಮಂಡಲ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಇತ್ತೀಚೆಗೆ ನಿಧನರಾದ ಗಣ್ಯರು, ರಾಜಕೀಯ ನಾಯಕರು, ರಾಷ್ಟ್ರದ ಸಾಧಕರಿಗೆ ಗೌರವ ಸಲ್ಲಿಸಲು ಸಂತಾಪ ಸೂಚಕ ನಿರ್ಣಯದ ಮೇಲೆ ಮುಖ್ಯಮಂತ್ರಿಗಳು ಮಾತನಾಡಿ, ಶ್ಲೋಕ, ಸುಭಾಷಿತಗಳೊಂದಿಗೆ ಅಗಲಿದ ಗಣ್ಯರಿಗೆ ನುಡಿನಮನ ಸಲ್ಲಿಸಿದರು.
“ಡಿ.ಸುಧಾಕರ್ ನನ್ನ ಆತ್ಮೀಯ ಗೆಳೆಯ. ಇಬ್ಬರದೂ ಒಂದೇ ವಯಸ್ಸು. ಆತನ ಉಸಿರು ಇಷ್ಟು ಬೇಗ ಹೋಗುತ್ತದೆ ಎಂದು ನಾವು, ನೀವು ಯಾರೂ ನಿರೀಕ್ಷಿಸಿರಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಸುಧಾಕರ್ ನನ್ನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕು ಅಂತ ಬಹಳ ಆಸೆ ಪಟ್ಟಿದ್ದರು. ನಿನ್ನ ಸಂಪುಟದಲ್ಲಿ ಮಂತ್ರಿಯಾಗದೇ ಇದ್ದರೂ ಚಿಂತೆ ಇಲ್ಲ ಎಂದಿದ್ದರು. ಪ್ರೀತಿ, ಗೆಳೆತನವನ್ನು ಒಪ್ಪಿಕೊಳ್ಳಬೇಕು. ಸಾವನ್ನು ಸ್ವಾಗತಿಸಬೇಕು ಎಂದು ಹಿರಿಯರು ಹೇಳಿದ್ದಾರೆ” ಎಂದರು.
“ಹುಟ್ಟುವಾಗ ಮಗು ಅಳುತ್ತಿರುತ್ತದೆ. ಆಗ ಸಮಾಜ ಬಹಳ ಸಂತೋಷ ಪಡುತ್ತದೆ. ಅದೇ ಮಗು ಬೆಳೆದು ದೊಡ್ಡವನಾಗಿ ಸಾಧನೆ ಮಾಡಿ ಸತ್ತಾಗ ಇದೇ ಸಮಾಜ ಅಳುತ್ತದೆ. ಗೆಳೆಯ ಸುಧಾಕರ್ ಅವರ ಸಾವು ಇನ್ನೂ ಕಣ್ಣ ಮುಂದಿದೆ. ಆ ಒಂದು ತಿಂಗಳು ಆತ ಬದುಕಿನಲ್ಲಿ ಮಾಡಿದ ಹೋರಾಟ ನೆನಸಿಕೊಂಡರೆ ದುಃಖವಾಗುತ್ತದೆ” ಎಂದು ಹೇಳಿದರು.
“ಎಸ್ ಎಂ ಕೃಷ್ಣ ಅವರು ಸಂಪುಟದಲ್ಲಿ ನಾನು ಸಹಕಾರ ಸಚಿವನಾಗಿದ್ದೆ. ಅಂದು ವಿಲಾಸ್ ರಾವ್ ದೇಶಮುಖ್ ಅವರನ್ನು ಆಹ್ವಾನಿಸಿ ಸಹಕಾರಿ ಸಪ್ತಾಹ ಮಾಡಿದ್ದೆವು. ಸಮಾರಂಭ ಮುಗಿದ ನಂತರ ಹಿರಿಯ ಅಧಿಕಾರಿಯೊಬ್ಬರು ನನ್ನ ಬಳಿ ಬಂದು, " ಕ್ಷಣಂ ಚಿತ್ತಂ ಕ್ಷಣಂ ವಿತ್ತಂ/ ಕ್ಷಣಂ ಜೀವತಿ ಮಾನವಃ/ ಯಮಸ್ಯ ಕರುಣಾ ನಾಸ್ತಿ ಧರ್ಮಸ್ಯ ತ್ವರಿತಾ ಗತಿಃ":ಎಂಬ ಶ್ಲೋಕ ಹೇಳಿದರು. "ನಿನ್ನ ಪ್ರತಿ ಕ್ಷಣ ಪವಿತ್ರವಾದದ್ದು. ಒಳ್ಳೇದು ಮಾಡೋದಕ್ಕೆ ಕಾಯಲು ಹೋಗಬೇಡ. ತೀರ್ಮಾನದಲ್ಲಿ ಜಾಗೃತರಾಗಿರಿ” ಎಂದು ಅರ್ಥ ವಿವರಿಸಿದರು.
“ಈ ಮಾತನ್ನು ಹೇಳಿದ ಆ ಅಧಿಕಾರಿಗೆ ಮಾರನೇ ದಿನ ಬೆಳಗ್ಗೆಯೇ ಹೃದಯಾಘಾತವಾಗಿ, ಮೃತಪಟ್ಟರು ಎನ್ನುವ ಮಾಹಿತಿ ಬಂತು. ಈ ಘಟನೆಯಿಂದ ತಿಳಿಯಬೇಕಾದದ್ದು ಏನೆಂದರೆ, ನಾವುಗಳು ಯಾರೂ ಚಿರಂಜೀವಿಗಳಲ್ಲ” ಎನ್ನುವುದನ್ನು ಮುಖ್ಯಮಂತ್ರಿಗಳು ಸದನಕ್ಕೆ ವಿವರಿಸಿದರು.
“ಸುಧಾಕರ್ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಅವರಿಗೆ ಯೋಜನೆ ಮತ್ತು ಸಾಂಖಿಕ್ಯ ಇಲಾಖೆ ಹಾಗೂ ಮುಜರಾಯಿ ಖಾತೆ ನೀಡಿದ್ದೆವು. ನಂತರ ಮುಜರಾಯಿ ಖಾತೆಯನ್ನು ರಾಮಲಿಂಗ ರೆಡ್ಡಿ ಅವರಿಗೆ ನೀಡಲಾಯಿತು. ಆಗ ಅವರು ನಿಮಗಾಗಿ ನಾನು ಸಚಿವ ಸ್ಥಾನ ಇಲ್ಲದೆಯೂ ಕೆಲಸ ಮಾಡಬಲ್ಲೇ ಎಂದಿದ್ದರು” ಎಂದು ಒಡನಾಟ ಸ್ಮರಿಸಿದರು.
ಸುಧಾಕರ್ ಹೆಸರಲ್ಲಿ ಸಣ್ಣ ನೀರಾವರಿ ಯೋಜನೆ :
“ಮನುಷ್ಯನ ಹುಟ್ಟು ಆಕಸ್ಮಿಕ. ಸಾವು ಖಚಿತ. ಶೋಕಿಸುವುದು ಸಹಜ ಕರ್ತವ್ಯ. ಆದರೆ ಪ್ರಯೋಜನ ಇಲ್ಲ. ಇದರ ಬದಲಾಗಿ ಅವರ ಪ್ರಮುಖ ಕನಸುಗಳು, ಯೋಜನೆಗಳನ್ನು ಸಾಕಾರ ಗೊಳಿಸಬೇಕು. ಆತ್ಮೀಯ ಮಿತ್ರ ಸುಧಾಕರ್ ನೀರಾವರಿ ಅಭಿವೃದ್ಧಿ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಅವರ ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗೆ ಚಾಲನೆ ನೀಡಬೇಕು ಎಂದು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಶಾಸಕರು ಪ್ರಯತ್ನ ಮಾಡಿದರು. ಸುಧಾಕರ್ ಅವರ ಹೆಸರನ್ನು ಚಿಸ್ಥಾಯಿ ಗೊಳಿಸುವ ನಿಟ್ಟಿನಲ್ಲಿ ಅವರ ನೆನಪಿನಲ್ಲಿ ಸಣ್ಣ ನೀರಾವರಿ ಯೋಜನೆಗೆ ಅವರ ಹೆಸರನ್ನು ನಾಮಕಾರಣ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇನೆ” ಎಂದರು.
ವೆಂಕಟರಮಣಪ್ಪ ಅವರನ್ನು ತೋಳ ಎನ್ನುತ್ತಿದ್ದೆವು
“ಪಾವಗಡದ ವೆಂಕಟರಣಪ್ಪನವರನ್ನು ನಾವು ತೋಳ, ತೋಳ ಎಂದು ಕರೆಯುತ್ತಿದ್ದೆವು. ಸಣ್ಣ ಕೈಗಾರಿಕೆ, ರೇಷ್ಮೆ ಜವಳಿ ಸಚಿವರಾಗಿದ್ದರು. ಕುಡಿಯುವ ನೀರಿಗೆ ಬಹುದೊಡ್ಡ ಹೋರಾಟ ಮಾಡಿದವರು. ತುಮಕೂರು- ರಾಯದುರ್ಗ ರೈಲ್ವೇ ಯೋಜನೆಗೆ ಶ್ರಮಿಸಿದ್ದರು. ಕೃಷಿ ವೃತ್ತಿ, ರಾಜಕೀಯ ಪ್ರವೃತ್ತಿ ಎಂದು ಹೇಳುತ್ತಿದ್ದರು” ಎಂದರು.
ರಾಮಚಂದ್ರೇಗೌಡರು ಸಜ್ಜನ ರಾಜಕಾರಣಿ
“ರಾಮಚಂದ್ರೇಗೌಡರು ನನ್ನ ಸಂಬಂಧಿಕರು. ಅವರು ಕಾರ್ಪೊರೇಟರ್ ಆಗಿದ್ದಾಗ ನಾನು ವಿದ್ಯಾರ್ಥಿ ನಾಯಕನಾಗಿದ್ದೆ. ಸಜ್ಜನ ರಾಜಕಾರಣಿ. ಯಡಿಯೂರಪ್ಪ ಅವರಿಗೆ ಬಲಗೈ ಬಂಟರಾಗಿದ್ದರು. 50 ವರ್ಷಗಳ ರಾಜಕೀಯ ಜೀವನದಲ್ಲಿ ಸರಳತೆಯಿಂದ ಇದ್ದವರು. ಬದುಕಿನಲ್ಲಿ ನ್ಯಾಯ, ನೀತಿ, ಸೇವೆಯನ್ನು ಗಮನದಲ್ಲಿಟ್ಟುಕೊಂಡು, ಶಿಸ್ತಿಗೆ ಪ್ರಾಮಾಣಿಕತೆಗೆ ಹೆಸರಾಗಿದ್ದರು” ಎಂದರು.
ಚನ್ನಮ್ಮ ಸರಳವಾಗಿ ಬದುಕಿದ ಹಿರಿಜೀವ
“ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮನವರ ಅಂತ್ಯಕ್ರಿಯೆಯ ವಿಚಾರವಾಗಿ ಅನೇಕ ಚರ್ಚೆಗಳು ನಡೆದವು. ಆದರೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ನಾನು ಗಟ್ಟಿ ನಿರ್ಧಾರ ತೆಗೆದುಕೊಂಡೆ. ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರು ಸರಳವಾಗಿ ಬದುಕಿದ ಜೀವ. ರಾಜಕಾರಣಿಗಳ ಮನೆಯಲ್ಲಿ ಹೆಣ್ಣುಮಕ್ಕಳು ಹೇಗಿರಬೇಕು ಎಂಬುದಕ್ಕೆ ಇವರ ಬದುಕೇ ಸಾಕ್ಷಿ. ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದಕ್ಕೆ ಅನ್ವರ್ಥದಂತೆ ಬದುಕಿದವರು. ತಾಯಿಯ ಮಾರ್ಗದರ್ಶನ ಸದಾ ಇತ್ತು ಎಂಬುದು ನನ್ನ ಭಾವನೆ” ಎಂದರು.
“ದೇವೇಗೌಡರು ಪ್ರಧಾನಿಗಳಾಗಲು, ಅವರ ಮಕ್ಕಳು ಈ ರಾಜ್ಯದ ಜನರ ಸೇವೆ ಮಾಡಲು ಚೆನ್ನಮ್ಮನವರ ಮಾರ್ಗದರ್ಶನವಿದೆ. ಅಧಿಕಾರ ಇರಲಿ ಇಲ್ಲದೇ ಇರಲಿ ನಾಡಿನ ಜನಸೇವೆಯಲ್ಲಿ ಅವರ ಕುಟಂಬ ತೊಡಗಿಕೊಂಡಿದೆ. ಅದಕ್ಕೆ ನಾವು ಆ ಕುಟುಂಬಕ್ಕೆ ಗೌರವ ಕೊಡಬೇಕು“ ಎಂದು ಮುಖ್ಯಮಂತ್ರಿಗಳು ಚೆನ್ನಮ್ಮನವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು.
“ಹನುಮಂತಪ್ಪನವರು ನನಗೆ ಬಹಳ ಆತ್ಮೀಯರು. ರೈಲ್ವೇ ಆಯೋಗದ ಅಧ್ಯಕ್ಷರಾಗಿದ್ದರು. ನಾನು ಜನರಲ್ ಹಾಸ್ಟೆಲ್ ನಲ್ಲಿ ರೂಮ್ ನಂಬರ್ 108 ರಲ್ಲಿ ಇದ್ದೆ. ಅವರು 110 ರಲ್ಲಿ ಇದ್ದರು. ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಮಾರ್ಗದರ್ಶನ ನೀಡಿದ್ದರು. ಚಿತ್ರದುರ್ಗದಲ್ಲಿ ಪಕ್ಷದ ಕಚೇರಿಗೆ ಬುನಾದಿ ಹಾಕಿದವರು. ನಿಜಲಿಂಗಪ್ಪನವ ಆಸ್ತಿ ಖರೀದಿಗೆ ಒತ್ತಾಯ ಮಾಡಿದ್ದರು” ಎಂದರು.
“ಜಾಫರ್ ಷರೀಫ್ ಅವರ ಅಳಿಯರಾದ ಸಯ್ಯದ್ ಯಾಸೀನ್ ಅವರು ಮೂರು ಬಾರಿ ನನ್ನ ಜೊತೆ ಶಾಸಕರಾಗಿದ್ದರು. ಮಾಜಿ ಸಚಿವರಾದ ವೆಂಕಟಾಚಲಯ್ಯ ಅವರು ನಾವು ಒಟ್ಟಿಗೆ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದೆವು. ಅವರು ನಂತರ ಶಾಸಕರಾದರು. ನಾನು ಅಂದು ಉಪಚುನಾವಣೆಯಲ್ಲಿ ದೊಡ್ಡ ಹೋರಾಟ ಮಾಡಿದೆ” ಹಳೆಯ ನೆನಪನ್ನು ಹಂಚಿಕೊಂಡರು.
“ಮಾಜಿ ಸಚಿವರಾದ ವೀರಣ್ಣನವರು ಉಗ್ರಪ್ಪ ಅವರ ಮಾವ. 1972ರಲ್ಲಿ ರಾಜಕೀಯ ಪ್ರವೇಶ ಮಾಡಿ, 83ರಲ್ಲಿ ಮಂತ್ರಿಯಾಗಿದ್ದರು. ಬಂಧಿಖಾನೆ ಮಂತ್ರಿಯಾಗಿ ಸೇವೆ ಮಾಡಿದ್ದರು. ದಕ್ಷತೆ ಪ್ರಾಮಾಣಿಕತೆಗೆ ಹೆಸರಾಗಿದ್ದರು” ಎಂದರು.
“ನಮ್ಮೆಲ್ಲರ ಬದುಕಿನ ಪ್ರತಿಯೊಂದು ಭಾವನೆಗೂ ದನಿ ನೀಡಿದ ಗಾನ ಕೋಗಿಲೆ ಜಾನಕಿ ಅವರನ್ನು ಸದಾ ಸ್ಮರಿಸಿಕೊಳ್ಳಬೇಕು. ಪ್ರೀತಿಗೆ, ನೋವಿಗೆ, ಭಕ್ತಿಗೆ, ತಾಯ್ತನಕ್ಕೆ, ಗೆಳೆತನಕ್ಕೆ ಧ್ವನಿ ನೀಡಿದ ದೊಡ್ಡ ಗಾಯಕಿ. ಅಮ್ಮ ನಮ್ಮ ಜೊತೆ ದೈಹಿಕವಾಗಿ ಇಲ್ಲ. ಆದರೆ ಕಲಾವಿದರಿಗೆ ಸಾವಿಲ್ಲ. ಅವರ ದನಿಯ ಮೂಲಕ ಜೀವಂತವಾಗಿದ್ದಾರೆ.
ಅವರು ಪಕ್ಕದ ರಾಜ್ಯದವರು ಆದರೆ ತಮ್ಮ ಅಂತಿಮ ಸಂಸ್ಕಾರ ಮೈಸೂರಿನಲ್ಲೇ ಆಗಬೇಕು ಎಂದು ತೀರ್ಮಾನ ಮಾಡಿದ್ದರು. ಅವರ ಕುಟುಂಬದವರು ಈ ಮಾತನ್ನು ಹೇಳಿದಾಗ ಆಶ್ಚರ್ಯವಾಯಿತು” ಎಂದು ಎಸ್ ಜಾನಕಿ ಅವರ ಸೇವೆಯನ್ನು ಕೊಂಡಾಡಿದರು.
“ಅವರ ಹಾಡುಗಳು, ನೆನಪುಗಳು ಎಲ್ಲರ ಜೊತೆಯಲ್ಲಿವೆ. ಜಾನಕಿಯವರು ಎಂದಿಗೂ ನಮ್ಮ ಜೊತೆ ಇರಲಿದ್ದಾರೆ. ಕಳೆದುಕೊಂಡ ಮೇಲೆ ಕೊರಗೋ ಬದಲು ಜೊತೆಗೆ ಇದ್ದಾಗ ಅವರನ್ನು ಮಹತ್ವ ಅರಿತುಕೊಳ್ಳಬೇಕು. ಇದರ ಜೊತೆಗೆ ಹಿಂದಿ ಚಿತ್ರರಂಗದ ಆಶಾ ಬೋಸ್ಲೆ ಅವರೂ ಅವರ ದನಿಯ ಮೂಲಕ ಅಜರಾಮರ “ ಎಂದರು.
ಮಾಜಿ ಸಚಿವರು, ಶಾಸಕರಾದ ವಿ. ಶ್ರೀನಿವಾಸನ್, ಕೆ.ಆರ್.ಶ್ರೀನಿವಾಸಯ್ಯ, ಎಚ್.ಎಸ್. ಪುಟ್ಟರಂಗನಾಥ್ ಅವರನ್ನು ಸಿಎಂ ಸ್ಮರಿಸಿದರು.






