ಸಿಎಂ ಡಿಕೆಶಿ ನೇತೃತ್ವದ ಸರಕಾರದ ಮೊದಲ ಅಧಿವೇಶನ: ಮಾಜಿ ಸಿಎಂ ಸಿದ್ದರಾಮಯ್ಯ ಗೈರು

ಡಿ.ಕೆ.ಶಿವಕುಮಾರ್/ಸಿದ್ದರಾಮಯ್ಯ
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರಕಾರದ ಮೊದಲ ವಿಧಾನಮಂಡಲದ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರು ಹಾಜರಾಗಿರುವುದು ಗಮನ ಸೆಳೆಯಿತು.
ಹೊಸ ಸರಕಾರದ ವಿಧಾನಸಭೆ ಅಧಿವೇಶನದ ಮೊದಲ ದಿನವಾದ ಗುರುವಾರ ಕಲಾಪದಲ್ಲಿ ಸಿದ್ದರಾಮಯ್ಯ ಗೈರು ಹಾಜರಿ ಚರ್ಚೆಗೆ ಗ್ರಾಸವಾಗಿರುವುದು ಮಾತ್ರವಲ್ಲದೆ, ಸಂಪುಟ ವಿಸ್ತರಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆಂಬ ಮಾತುಗಳು ಕೇಳಿ ಬಂದಿವೆ. ಜತೆಗೆ, ಆಡಳಿತ ಪಕ್ಷದ ಸದಸ್ಯರಲ್ಲಿ ಬಹುತೇಕರು ಮೊದಲ ದಿನದ ಕಲಾಪಕ್ಕೆ ಗೈರಾಗಿದ್ದಾರೆ.
ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ಹೆಚ್ಚಾಗಿತ್ತು. ಆದರೆ, ಈಗ ಮೊದಲ ಅಧಿವೇಶನದಲ್ಲಿ ಆಡಳಿತಾರೂಢ ಶಾಸಕರ ಹಾಜರಾತಿ ವಿಚಾರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಗುರುವಾರವೇ ಸಚಿವರು ಸೇರಿ ಕಾಂಗ್ರೆಸ್ನ 65 ರಿಂದ 70ಮಂದಿ ಮಾತ್ರ ಕಲಾಪದಲ್ಲಿ ಭಾಗಿಯಾಗಿದ್ದರು. ಗೈರಾದವರ ಪೈಕಿ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಸ್ಥಾನದ ಆಕಾಂಕ್ಷಿಗಳಾದ ಪ್ರಿಯಾಕೃಷ್ಣ, ಎಂ. ಕೃಷ್ಣಪ್ಪ, ಯಶವಂತರಾಯಗೌಡ ಪಾಟೀಲ್, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಸೇರಿದಂತೆ ಪ್ರಮುಖರು ಇದ್ದಾರೆ.
ಇನ್ನೊಂದೆಡೆ, ಎಚ್.ಕೆ.ಪಾಟೀಲ್, ಡಾ.ಎಂ.ಸಿ.ಸುಧಾಕರ್, ಹಂಪನಗೌಡ ಬಾದರ್ಲಿ, ಎಸ್.ಎನ್. ನಾರಾಯಣ ಸ್ವಾಮಿ, ಮಂಕಾಳ ವೈದ್ಯ, ಆರ್.ವಿ.ದೇಶಪಾಂಡೆ, ಶರತ್ ಬಚ್ಚೇಗೌಡ, ಬಿ.ಆರ್.ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಅನ್ನಪೂರ್ಣ ತುಕಾರಾಂ, ರೂಪ ಶಶಿಧರ್ ಕಲಾಪದಲ್ಲಿ ಭಾಗಿಯಾಗಿದ್ದರು.
‘ಹಣೆ ಬರಹ’ ಎಂದ ಹೆಬ್ಬಾಳ್ಕರ್: ಸಚಿವ ಸ್ಥಾನ ವಂಚಿತ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಲಾಪಕ್ಕೆ ಆಗಮಿಸುತ್ತಿದ್ದಂತೆ ಹಣೆ ಬರಹದ ಸನ್ನೆ ಮೂಲಕ ಗಮನ ಸೆಳೆದರು. ವಿಧಾನಸಭೆ ಕಲಾಪಕ್ಕೆ ಆಗಮಿಸಿದ ಅವರು ಹಿಂಬದಿ ಸ್ಥಾನದಲ್ಲಿ ಕುಳಿತುಕೊಂಡಿದ್ದರು. ಪರಸ್ಪರ ಮಾತನಾಡಿಕೊಳ್ಳುತ್ತಿದ್ದ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಣೆಯ ಮೇಲೆ ಕೈ ಸನ್ನೆ ಮಾಡಿ, ಸಚಿವ ಸ್ಥಾನ ಸಿಗದಿರುವ ಬಗ್ಗೆ ಎಲ್ಲವೂ ಹಣೆ ಬರಹ ಎಂಬ ಅರ್ಥದಲ್ಲಿ ತಮ್ಮ ಅಸಹಾಯಕತೆ ಹೊರಹಾಕಿದರು.






