ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರ ಬಲಿ ಪ್ರಕರಣ: ವಿಧಾನ ಮಂಡಲದಲ್ಲಿ ನಾಳೆ ಪ್ರತಿಧ್ವನಿಸುವ ಸಾಧ್ಯತೆ

ಬೆಂಗಳೂರು : ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ವಲಯದಲ್ಲಿ ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಮೂವರು ಶಂಕಿತ ಬೇಟೆಗಾರರು ಬಲಿಯಾದ ಪ್ರಕರಣ ನಾಳೆ(ಆ.17) ವಿಧಾನ ಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳಿದ್ದು, ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವಿನ ವಾಗ್ಯುದ್ದಕ್ಕೆ ವೇದಿಕೆಯಾಗುವುದು ನಿಶ್ಚಿತವಾಗಿದೆ.
ಹನೂರು ಸಮೀಪದ ಮರಿಯಮಂಗಲ ಗ್ರಾಮದ ಅಂಥೋಣಿ ಸ್ವಾಮಿ, ಲಾಜಾರ್‍ದೊಡ್ಡಿಯ ಕುಮಾರ್ ಹಾಗೂ ಜಗನ್ನಾಥನ್ ದೊಡ್ಡಿಯ ಪೀಟರ್ ಸೇರಿ ಮೂವರು ಬಲಿಯಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿ- ಸಿಬ್ಬಂದಿ ವಿರುದ್ಧ ಸ್ಥಳೀಯರ ಪ್ರತಿಭಟನೆ ನಡೆಸಿದ್ದಾರೆ. ಈಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆಗೆ ಸಿಎಂ ಡಿ.ಕೆ.ಶಿವಕುಮಾರ್ ಆದೇಶ ಮಾಡಿದ್ದಾರೆ. ಈ ಮಧ್ಯೆ ಇಲಾಖೆ ಅಧಿಕಾರಿಗಳ ಹೇಳಿಕೆಗಳು ಗೊಂದಲದಿಂದ ಕೂಡಿದ್ದು, ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ನಾಗೇಂದ್ರ ರಾಜೀನಾಮೆಗೆ ಒತ್ತಾಯ: ಚಾಮರಾಜನಗರ ಎನ್‍ಕೌಂಟರ್ ಪ್ರಕರಣದ ಜತೆಗೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಆರೋಪದಲ್ಲಿ ಸಿಲುಕಿರುವ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಜ್ಜಾಗಿದೆ.
ವಾಲ್ಮೀಕಿ ನಿಗಮದ ಹಣ ದುರುಪಯೋಗ ಪ್ರಕರಣ ಹಾಗೂ ಕೋರ್ಟ್ ಷರತ್ತು ಉಲ್ಲಂಘಿಸಿ ನಾಗೇಂದ್ರ ದಿಲ್ಲಿಗೆ ತೆರಳಿರುವ ಆರೋಪಗಳನ್ನು ಮುನ್ನೆಲೆಗೆ ತಂದು ಸರಕಾರವನ್ನು ಅಡ್ಡಕತ್ತರಿಯಲ್ಲಿ ಸಿಲುಕಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಬಿ.ನಾಗೇಂದ್ರ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಪಟ್ಟುಹಿಡಿಯುವ ಸಾಧ್ಯತೆಗಳಿವೆ.
ಪ್ರತಿಪಕ್ಷ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್, ದಿಲ್ಲಿಯ ಜಂತರ್ ಮಂತರ್‍ನಲ್ಲಿ ಇತ್ತಿಚೇಗೆ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಪೊಲೀಸರ ಲಾಠಿ ಪ್ರಹಾರ ಪ್ರಕರಣ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ನೆಪದಲ್ಲಿ ಅಪಮಾನ ಮಾಡಿದ ಪ್ರಕರಣ ಹಾಗೂ ಆರೆಸ್ಸೆಸ್ ನೋಂದಣಿ ವಿಚಾರಗಳನ್ನು ಪ್ರಸ್ತಾಪಿಸುವ ನಿರೀಕ್ಷೆಯಿದೆ.
ನಾಳೆ(ಆ.17) ಬೆಳಗ್ಗೆ 11ಗಂಟೆಗೆ ಉಭಯ ಸದನಗಳ ಕಲಾಪ ಆರಂಭವಾಗಲಿದ್ದು, ಕಾರ್ಯಕಲಾಪ ಪಟ್ಟಿಯಲ್ಲಿ ಪ್ರಶ್ನೋತ್ತರ, ವರದಿಯನ್ನೊಪ್ಪಿಸುವುದು, ವಿಧೇಯಕವನ್ನು ಹಿಂಪಡೆಯುವುದು ಹಾಗೂ ಗಮನ ಸೆಳೆಯುವ ಸೂಚನೆಗಳನ್ನು ಹಾಕಲಾಗಿದೆ. ಅಲ್ಲದೆ, ಪ್ರತಿಪಕ್ಷ ಬಿಜೆಪಿ ಹನೂರು ಘಟನೆ ಸಂಬಂಧ ನಿಲುವಳಿ ಮಂಡಿಸುವ ಸಾಧ್ಯತೆಗಳಿವೆ.






