ಮೇಲ್ಮನೆಯಲ್ಲಿ ಗದ್ದಲದ ನಡುವೆಯೂ ಮೂರು ವಿಧೇಯಕಗಳ ಅಂಗೀಕಾರ

ಬೆಂಗಳೂರು : ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ ಹಾಗೂ ಘೋಷಣೆಗಳ ಗದ್ದಲದ ನಡುವೆಯೂ ವಿಧಾನಸಭೆಯಿಂದ ಅಂಗೀಕೃತಗೊಂಡ ಬೆಂಗಳೂರು ಅಭಿವೃಧ್ಧಿ ಪ್ರಾಧಿಕಾರ(ತಿದ್ದುಪಡಿ) ವಿಧೇಯಕ-2026 ಸೇರಿ ಮೂರು ವಿಧೇಯಕಗಳು ಶುಕ್ರವಾರ ಮೇಲ್ಮನೆಯಲ್ಲಿ ಅಂಗೀಕಾರಗೊಂಡವು.
ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಬೆಂಗಳೂರು ಅಭಿವೃಧ್ಧಿ ಪ್ರಾಧಿಕಾರ(ತಿದ್ದುಪಡಿ) ವಿಧೇಯಕ-2026 ಅಂಗೀಕರಿಸುವಂತೆ ವಿಧಾನ ಪರಿಷತ್‍ನಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಕೋರಿದರು. ಈ ವಿಧೇಯಕವು ಅಂಗೀಕಾರವಾಯಿತು.
ಈ ವಿಧೇಯಕವು ಒಂದು ಲಕ್ಷಕ್ಕಿಂತ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗುತ್ತದೆ. ಈ ಹಿಂದೆ ಬೆಂಗಳೂರಿನಲ್ಲಿ ಭೂಸ್ವಾಧೀನ ಆದ ಮೇಲೆ ಅನಧಿಕೃತ ಬಡಾವಣೆ ಮಾಡಿ ಮನೆಗಳಿಗೆ ದಾಖಲಾತಿ ನೀಡಿರುವುದಿಲ್ಲ. ಇದರಿಂದ ಜನರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಅವರೆಲ್ಲರೂ ಪಕ್ಕಾ ದಾಖಲೆ ಮಾಡಿಕೊಳ್ಳಲು ದುಬಾರಿ ಶುಲ್ಕ ವಿಧಿಸಲಾಗಿದೆ. ಈ ದುಬಾರಿ ಶುಲ್ಕವನ್ನು ಕಡಿಮೆ ಮಾಡಿ 1,11,560 ಕುಟುಂಬಗಳಿಗೆ ದಾಖಲೆ ಮಾಡಿಕೊಡುವುದೆ ಈ ವಿಧೇಯಕದ ಉದ್ದೇಶ ಎಂದು ಸದನಕ್ಕೆ ಸಚಿವರು ವಿವರಿಸಿದರು.
ಮುಂದುವರಿದು, ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ 2026 ಹಾಗೂ ನಾಡಪ್ರಭು ಕೆಂಪೆಗೌಡ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ 2026 ವಿಧೇಯಕಗಳನ್ನು ಅಂಗೀಕರಿಸುವಂತೆ ಸಚಿವ ಕೃಷ್ಣ ಬೈರೇಗೌಡ ವಿಧಾನ ಪರಿಷತ್‍ನಲ್ಲಿ ಕೋರಿದರು. ಈ ವಿಧೇಯಕಗಳಿಗೂ ಅನುಮೋದನೆ ದೊರಕಿದ್ದು, ಸಭಾಪತಿ ಸಲೀಂ ಅಹ್ಮದ್ ಅಂಗೀಕರಿಸಿದರು.






