ಮುಂಗಾರು ಅಧಿವೇಶನ | ಆರು ವಿಧೇಯಕಗಳಿಗೆ ಧ್ವನಿಮತದ ಅಂಗೀಕಾರ

ಬೆಂಗಳೂರು, ಆ.13 : 2025ನೆ ಸಾಲಿನ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ನಾಡಪ್ರಭು ಕೆಂಪೆಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರವು ಸೇರಿದಂತೆ ಆರು ವಿವಿಧ ಪ್ರಾಧಿಕಾರಗಳ ಅಭಿವೃದ್ಧಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಪ್ರತ್ಯೇಕ ತಿದ್ದುಪಡಿ ವಿಧೇಯಕಗಳನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಬುಧವಾರ ವಿಧಾನಸಭೆ ಶಾಸನ ರಚನೆ ಕಲಾಪದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಿ ಅನುಮೋದನೆ ಕೋರಿದರು. ಈ ಬಗ್ಗೆ ವಿವರಣೆ ನೀಡಿದ ಅವರು, ‘ಈ ಹಿಂದೆ ಒಂದೆರಡು ಅಭಿವೃದ್ಧಿ ಪ್ರಾಧಿಕಾರಗಳಿದ್ದವು, ಹೀಗಾಗಿ ಆ ಪ್ರಾಧಿಕಾರಗಳಿಗೆ ಸಿಎಂ ಅಧ್ಯಕ್ಷರಾಗಿರಬೇಕೆಂಬ ನಿಯಮ ಇತ್ತು. ಆದರೆ, ಇಂದು ಪ್ರಾಧಿಕಾರಗಳ ಸಂಖ್ಯೆ ಅಧಿಕವಾಗಿದೆ. ಅಲ್ಲದೆ, ಸಿಎಂ ಅವರಿಗೂ ಕಾರ್ಯ ಒತ್ತಡದ ನಡುವೆ ಪ್ರಾಧಿಕಾರಗಳ ಅಭಿವೃದ್ಧಿಗೆ ಸಿಎಂ ಗಮನ ನೀಡುವುದು ಕಷ್ಟದ ವಿಚಾರ.
ಹೀಗಾಗಿ ಎಲ್ಲ ಪ್ರಾಧಿಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಡೆಯಬೇಕೆಂಬ ಉದ್ದೇಶದಿಂದ ಪ್ರಾಧಿಕಾರಗಳಿಗೆ ಮುಖ್ಯಮಂತ್ರಿ ಅಥವಾ ಇಲಾಖೆ ಸಚಿವರು ಅಥವಾ ಸರಕಾರ ಸೂಚಿಸಿದ ಪ್ರಾಧಿಕಾರದ ಅಭಿವೃದ್ಧಿ ಬಗ್ಗೆ ಆಸಕ್ತಿ ಇರುವ ಯಾವುದೇ ಸಚಿವರನ್ನು ನೇಮಕ ಮಾಡಲು ಈ ತಿದ್ದುಪಡಿಯಲ್ಲಿ ಅವಕಾಶ ನೀಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆ ಬಳಿಕ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ, ನಾಡಪ್ರಭು ಕೆಂಪೆಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರ, ಕಿತ್ತೂರು ಅಭಿವೃದ್ದಿ ಪ್ರಾಧಿಕಾರ ತಿದ್ದುಪಡಿ, ಕೂಡಲಸಂಗಮ ಅಭಿವೃದ್ದಿ ಮಂಡಳಿ ತಿದ್ದುಪಡಿ, ಬನವಾಸಿ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ, ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಸೇರಿದಂತೆ ಆರು ವಿಧೇಯಕಗಳಿಗೆ ಧ್ವನಿಮತ ಅಂಗೀಕಾರ ನೀಡಲಾಯಿತು.







