ವೀರಪ್ಪನ್‍ಗಿಂತ ಸಿದ್ದರಾಮಯ್ಯ ಕಾಲದಲ್ಲೇ ಆನೆ ಸಾವು ಅಧಿಕ: ಆರ್. ಅಶೋಕ್

ಬೆಂಗಳೂರು: ಕಾಡುಗಳ್ಳ ವೀರಪ್ಪನ್ ಹಾವಳಿಗಿಂತಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಆನೆಗಳು ಸಾವನ್ನಪ್ಪುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೀರಪ್ಪನ್ ತನ್ನ 25 ವರ್ಷಗಳ ಕಾಡುಗಳ್ಳತನದ ಅವಧಿಯಲ್ಲಿ ಸುಮಾರು 500 ಆನೆಗಳನ್ನು ಕೊಂದಿರಬಹುದು. ಆದರೆ, ಈ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೇವಲ ಎರಡೂವರೆ ವರ್ಷದಲ್ಲಿ ಬರೋಬ್ಬರಿ 206 ಆನೆಗಳು ಸಾವನ್ನಪ್ಪಿವೆ. ಸಿದ್ದರಾಮಯ್ಯನವಗಿಂತ ವೀರಪ್ಪನ್ ಉತ್ತಮ ಎನಿಸುತ್ತದೆ ಎಂದರು.
61 ಚಿರತೆ, 19 ನವಿಲು, ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದ ಜಿಂಕೆಗಳು ಸತ್ತಿವೆ. ಜಿಂಕೆ ಮಾಂಸ ಮಾರಾಟವಾಗುತ್ತಿದೆ. ವಿದೇಶದಿಂದ ಹಾವುಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಯುವ ಬದಲು ಸಫಾರಿ ರದ್ದು ಮಾಡಲಾಗಿದೆ. ಯಾವುದೇ ರಾಜ್ಯಗಳಲ್ಲಿ ಸಫಾರಿ ರದ್ದು ಮಾಡಿಲ್ಲ. ಸಫಾರಿಯಿಂದ ವನ್ಯಜೀವಿ ಸಂಘರ್ಷ ಆಗುತ್ತಿಲ್ಲ. ಸಫಾರಿ ಮಾಡುವ ಜಂಗಲ್ ರೆಸಾರ್ಟ್‍ಗಳಲ್ಲಿ 6,000 ಸಿಬ್ಬಂದಿ ಇದ್ದಾರೆ. ಇದರಿಂದಾಗಿ ಪ್ರವಾಸೋದ್ಯಮ ಕುಸಿತವಾಗಿದೆ. ರೈತರು, ಸ್ಥಳೀಯರಿಗೆ ಇದರಿಂದ ನಷ್ಟವಾಗಿದೆ ಎಂದು ಅವರು ಹೇಳಿದರು.
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಭಾಗಕ್ಕೆ ಹೊಸದಾಗಿ ಏನೂ ನೀಡಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಾನು ಎರಡು ಗಂಟೆ ಮಾತಾಡಿದ್ದೇನೆ. ಆದರೆ, ಈ ರಾಜ್ಯ ಸರಕಾರ ಯಾವುದೇ ಹೊಸ ಘೋಷಣೆ ಮಾಡದೆ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಗೃಹಲಕ್ಷ್ಮೀ ಯೋಜನೆಗೆ ಹಣ ನೀಡಲು ಏಕೆ ವಿಳಂಬವಾಗಿದೆ ಎಂದು ಸರ್ಕಾರ ಸರಿಯಾಗಿ ತಿಳಿಸಿಲ್ಲ. 1.26 ಕೋಟಿ ಮಹಿಳೆಯರಿಗೆ ಅನ್ಯಾಯವಾಗಿದ್ದು, ಇದು ದೊಡ್ಡ ಹಗರಣವಾಗಿದೆ. ಫೆಬ್ರವರಿ ಹಾಗೂ ಮಾರ್ಚ್‍ನ ಹಣ ಏನಾಗಿದೆ ಎಂಬುದನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇನ್ನೂ ಹೇಳಿಲ್ಲ. ಮಹಿಳೆಯರಿಗೆ ಹಣ ಸಿಗುವವರೆಗೆ ನಾವು ಹೋರಾಟ ಮಾಡುತ್ತೇವೆ ಎಂದು ಅಶೋಕ್ ಹೇಳಿದರು.







