ಇನ್ನಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು: ಸಿಎಂ ಡಿ.ಕೆ. ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿ ಭೀಕರ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು ವೈಜ್ಞಾನಿಕ ಹಾಗೂ ತಾಂತ್ರಿಕ ವರದಿಗಳನ್ನು ಆಧರಿಸಿ ಇನ್ನೇರಡು ಹಂತಗಳಲ್ಲಿ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ತಾಲೂಕಿನಿಂದ ಬರದ ವರದಿಗಳು ಬರುತ್ತಿವೆ. ಇನ್ನಷ್ಟು ತಾಲೂಕುಗಳು ಬರ ಎಂದು ಘೋಷಣೆ ಮಾಡುತ್ತೇವೆ. ಅನೇಕ ಕಡೆ ಭೀಕರ ಬರ ಇದ್ದು, 21 ದಿನ ಮಳೆಯಾಗದ ಸ್ಥಳಗಳನ್ನು ಗುರುತಿಸಿ ತಾಂತ್ರಿಕ ವರದಿ ಆಧರಿಸಿ ತೀರ್ಮಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಬರ ಸಂಬಂಧ ಶಾಸಕರು ಆತಂಕ ವ್ಯಕ್ತಪಡಿಸುವ ಅಗತ್ಯತೆ ಇಲ್ಲ. ಎಲ್ಲೆಲ್ಲಿ ಬರ ಇದೆ ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸಬೇಕು. ಉಪಮುಖ್ಯಮಂತ್ರಿ ವರದಿಗಳನ್ನು ತರಿಸಿಕೊಳ್ಳುತ್ತಾರೆ. ಒಂದೇ ಬಾರಿಗೆ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಹಂತಗಳಲ್ಲಿ ಪ್ರಕ್ರಿಯೆ ನಡೆಯುತ್ತಿದೆ ಎಂದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ವಿಶೇಷ ವಿಧಾನಸಭೆ ಅಧಿವೇಶನ ಕರೆಯಲಾಗಿದೆ. ಬರಪೀಡಿತ ಪ್ರದೇಶಗಳ ವಾಸ್ತವ ಸ್ಥಿತಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ರೈತರಿಗೆ ಅಗತ್ಯ ನೆರವು ಒದಗಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದೂ ಹೇಳಿದರು.






