ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ ಹಿನ್ನೆಲೆ ಸೆ.30ರಿಂದ ರಾಜ್ಯದ ಎಲ್ಲೆಡೆ ಚಿತ್ರಮಂದಿರಗಳಲ್ಲಿ ಸಿನೆಮಾ ಟಿಕೆಟ್ ದರ ಏರಿಕೆ ಆಗಲಿದೆ.
ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಸಂಬಂಧ ರಾಜ್ಯ ಸರಕಾರ ಇತ್ತೀಚಿಗೆ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಸಿನಿಮಾ ಟಿಕೆಟ್ಗಳು ಸೇರಿದಂತೆ ಅಧಿನಿಯಮದ ವ್ಯಾಪ್ತಿಗೆ ಬರುವ ಆದಾಯದ ಮೇಲೆ ಕನಿಷ್ಠ ಶೇ.1ರಿಂದ ಗರಿಷ್ಠ ಶೇ.2ರವರೆಗೆ ಕ್ಷೇಮಾಭಿವೃದ್ಧಿ ಉಪಕರ (ಸೆಸ್) ವಿಧಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಪ್ರಮುಖವಾಗಿ ಟಿಕೆಟ್ ದರ ಏರಿಕೆಯಾಗಲಿದೆ.
2024ರ ಕರ್ನಾಟಕ ಅಧಿನಿಯಮ ಸಂಖ್ಯೆ 46ರ ಪ್ರಕರಣ 1(2)ರಡಿ ನೀಡಿರುವ ಅಧಿಕಾರವನ್ನು ಚಲಾಯಿಸಿ ಕಾಯ್ದೆಯ ಎಲ್ಲ ಉಪಬಂಧಗಳು ಸೆ.30ರಿಂದ ಜಾರಿಗೆ ಬರಲಿ. ಸಿನಿಮಾ ಹಾಗೂ ಸಾಂಸ್ಕೃತಿ ಕ್ಷೇತ್ರದ ಕಾರ್ಮಿಕರು ಮತ್ತು ಕಾರ್ಯಕರ್ತರ ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ 2024ರಲ್ಲಿ ಈ ಸಂಬಂಧ ವಿಧೇಯಕವನ್ನು ಮಂಡಿಸಿತ್ತು. ವಿಧಾನಮಂಡಲದ ಅಂಗೀಕಾರದ ಬಳಿಕ 2024ರ ಸೆಪ್ಟೆಂಬರ್ 23ರಂದು ರಾಜ್ಯಪಾಲರು ವಿಧೇಯಕಕ್ಕೆ ಅಂಕಿತ ಹಾಕಿದ್ದರು. ಮರುದಿನ, ಸೆಪ್ಟೆಂಬರ್ 24ರಂದು ವಿಶೇಷ ರಾಜ್ಯಪತ್ರದಲ್ಲಿ ಕಾಯ್ದೆಯನ್ನು ಪ್ರಕಟಿಸಲಾಗಿತ್ತು.
ಆದರೆ ಕಾಯ್ದೆ ಅಂಗೀಕಾರಗೊಂಡು ಸುಮಾರು ಎರಡು ವರ್ಷಗಳ ಬಳಿಕ ಇದೀಗ ಅದರ ಉಪಬಂಧಗಳನ್ನು ಜಾರಿಗೆ ತರಲು ಸರಕಾರ ದಿನಾಂಕ ನಿಗದಿಪಡಿಸಿದೆ. ಸೆಪ್ಟೆಂಬರ್ 30ರಿಂದ ಕಾಯ್ದೆ ಜಾರಿಗೆ ಬರುವುದರಿಂದ ಇದರಡಿ ಸೆಸ್ ಸಂಗ್ರಹಿಸುವ ವ್ಯವಸ್ಥೆಯೂ ಕಾರ್ಯರೂಪಕ್ಕೆ ಬರಲಿದೆ ಎಂದು ರಾಜ್ಯ ಸರಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾಯ್ದೆಯ ಪ್ರಕಾರ, ಸರ್ಕಾರ ಅಧಿಸೂಚಿಸುವ ಸಿನಿಮಾ ಟಿಕೆಟ್ಗಳು, ವಂತಿಗೆ ಶುಲ್ಕಗಳು ಹಾಗೂ ಸಂಬಂಧಿತ ಸಂಸ್ಥೆಗಳಿಂದ ಸೃಜಿಸಲ್ಪಡುವ ಆದಾಯದ ಮೇಲೆ ಸೆಸ್ ವಿಧಿಸಲು ಅವಕಾಶವಿದೆ. ಈ ದರ ಶೇ.1ಕ್ಕಿಂತ ಕಡಿಮೆಯಿರಬಾರದು ಮತ್ತು ಶೇ.2ಕ್ಕಿಂತ ಹೆಚ್ಚಿರಬಾರದು ಎಂಬ ಮಿತಿ ನಿಗದಿಪಡಿಸಲಾಗಿದೆ. ಹೀಗಾಗಿ ಸರಕಾರ ಗರಿಷ್ಠ ದರವಾದ ಶೇ.2ನ್ನು ಅನ್ವಯಿಸಿದಲ್ಲಿ ಸಿನಿಮಾ ಟಿಕೆಟ್ ದರದ ಮೇಲೆ ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ. ಉದಾಹರಣೆಗೆ, ಸೆಸ್ ಲೆಕ್ಕಕ್ಕೆ ಒಳಪಡುವ ಟಿಕೆಟ್ ಮೊತ್ತ 200 ಆಗಿದ್ದರೆ, ಶೇ.2ರ ದರದಲ್ಲಿ 4 ಹೆಚ್ಚುವರಿ ಉಪಕರವಾಗುತ್ತದೆ. ಆದರೆ ಅಂತಿಮವಾಗಿ ಯಾವ ದರವನ್ನು ಅನ್ವಯಿಸಲಾಗುತ್ತದೆ ಎಂಬುದು ಸರಕಾರದ ಸಂಬಂಧಿತ ಅಧಿಸೂಚನೆಗೆ ಒಳಪಟ್ಟಿರುತ್ತದೆ.
ಸಿನಿಮಾ ನಿರ್ಮಾಣ, ಪ್ರದರ್ಶನ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಹಿಂದೆ ದೊಡ್ಡ ಪ್ರಮಾಣದಲ್ಲಿ ವಿವಿಧ ವರ್ಗದ ಕಾರ್ಯಕರ್ತರು ದುಡಿಯುತ್ತಿದ್ದಾರೆ. ನಟ, ನಟಿಯರಿಂದ ಹಿಡಿದು ತಾಂತ್ರಿಕ ಸಿಬ್ಬಂದಿ, ಕಲಾವಿದರು ಹಾಗೂ ಸಾಂಸ್ಕೃತಿಕ ಕ್ಷೇತ್ರದ ವಿವಿಧ ಕಾರ್ಯಕರ್ತರ ಕ್ಷೇಮಾಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ ಈ ಕಾಯ್ದೆ ರೂಪಿಸಲಾಗಿದೆ.






