ತೇಜಸ್ವಿ ಸೂರ್ಯ ʼವೇಸ್ಟ್ ಮೆಟೀರಿಯಲ್ʼ : ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ತೇಜಸ್ವಿ ಸೂರ್ಯ/ಡಿ.ಕೆ.ಶಿವಕುಮಾರ್
ಬೆಂಗಳೂರು : "ಸಂಸದ ತೇಜಸ್ವಿ ಸೂರ್ಯ ಇನ್ನು ಎಳಸು. ಆತನಿಗೆ ಅನುಭವದ ಕೊರತೆ ಇದೆ. ಅವನೊಬ್ಬ ವೇಸ್ಟ್ ಮೆಟೀರಿಯಲ್. ಗೌರವ ಕೊಟ್ಟು ಕರೆದು ಮಾತಾಡಿದರೆ ಬಾಯಿಗೆ ಬಂದಂತೆ ವದರುತ್ತಿದ್ದಾನೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಗುರುವಾರ ಪ್ರತಿಕ್ರಿಯೆ ನೀಡಿದ ಅವರು, ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು? ಈ ದೇಶದಲ್ಲಿ, ಪ್ರಪಂಚದಲ್ಲಿಯೇ ಟನಲ್ ರಸ್ತೆಗಳೇ ಬೇಡ ಎಂದು ಅವನು ಕೇಂದ್ರ ಸಚಿವನಾದ ಮೇಲೆ ಲೋಕಸಭೆಯಲ್ಲಿ ತೀರ್ಮಾನ ಮಾಡಲಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟನಲ್ ರಸ್ತೆ ಯೋಜನೆಯನ್ನು ತಂತ್ರಜ್ಞರ ಅಭಿಪ್ರಾಯ ಪಡೆದು ಮಾಡಬೇಕಿತ್ತು ಎನ್ನುವ ಹೇಳಿಕೆಯ ಬಗ್ಗೆ ಕೇಳಿದಾಗ ಉತ್ತರಿಸಿದ ಡಿಸಿಎಂ ಅವರು, "ಏನೋ ಹೋಗಲಿ ಅಂತ ಗೌರವ ಕೊಟ್ಟು ನನ್ನ ಜೊತೆ ಮಾತನಾಡಲು ಅವಕಾಶ ನೀಡಿದರೆ ಏನೇನೋ ಮಾತನಾಡುತ್ತಿದ್ದಾನೆ. ಆದರೆ ನಾನು ಆತನ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಸಂಸದ ತೇಜಸ್ವಿ ಸೂರ್ಯನಿಗೆ ಪ್ರಪಂಚ ಹೇಗಿದೆ ಎಂದೇ ಗೊತ್ತಿಲ್ಲ" ಎಂದರು.
ಈತ ಏಕೆ ಕಾರಲ್ಲಿ ಓಡಾಡುತ್ತಿದ್ದಾನೆ?
"ನಾನು ಹುಡುಗನ ಬಳಿ ಕಾರಿಲ್ಲದಿದ್ದರೆ ಹೆಣ್ಣು ನೀಡುವುದಿಲ್ಲ ಎಂದಿದ್ದೆ. ಅದನ್ನೇ ಹಿಡಿದುಕೊಂಡು ಮಾತಾಡುತ್ತಿದ್ದಾನೆ. ಈತ ಏಕೆ ಕಾರಲ್ಲಿ ಓಡಾಡುತ್ತಿದ್ದಾನೆ? ಆತ, ಆತನ ಕುಟುಂಬ ಸದಸ್ಯರು ಮೆಟ್ರೋ, ಸರಕಾರಿ ಬಸ್ ಬಳಸಲಿ. ಅವರ ಪಕ್ಷದ ಶಾಸಕರು ಮೆಟ್ರೋ, ಆಟೋರಿಕ್ಷಾ, ಸಾರ್ವಜನಿಕ ಸಾರಿಗೆಗಳಲ್ಲಿ ಓಡಾಡಲಿ. ಬೇಡ ಎಂದವರಾರು? ಇವರಿಗೆ ಕಾರುಗಳು ಏಕೆ ಬೇಕು? ಬೆಂಗಳೂರಿನಲ್ಲಿ 1.30 ಕೋಟಿಗೂ ಹೆಚ್ಚು ವಾಹನಗಳಿವೆ ಎಂಬುದನ್ನು ಆತ ಅರ್ಥ ಮಾಡಿಕೊಳ್ಳಬೇಕು, ಅವರಿಗೆಲ್ಲ ವಾಹನ ಬಳಸಬೇಡಿ ಎಂದು ಹೇಳಲು ಆಗುತ್ತದೆಯೇ" ಎಂದು ಪ್ರಶ್ನಿಸಿದರು.
ಮದುವೆ ಮಾಡಿಸಲು ಈ ಯೋಜನೆ ಕೈಗೆತ್ತಿಕೊಂಡಿದ್ದಾರೆ ಎನ್ನುವ ಟೀಕೆಯ ಬಗ್ಗೆ ಕೇಳಿದಾಗ, "ಅದಕ್ಕೆ ನಾನು ಆತನನ್ನು ಎಳಸು ಎಂದು ಕರೆದಿದ್ದು. ನೀವೆಲ್ಲರೂ ಕ್ಯಾಮೆರಾ ಹಿಡಿದುಕೊಂಡು (ಮಾಧ್ಯಮದವರು) ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಿಕೊಂಡು ಕೆಲಸ ಮಾಡಲು ಆಗುತ್ತದೆಯೇ? ಶಾಲಾ ಮಕ್ಕಳನ್ನು ಶಾಲಾ ವಾಹನದಲ್ಲಿ ಕಳುಹಿಸುತ್ತಾರೆ. ಅವರಿಗೆ ಸಾರ್ವಜನಿಕ ಸಾರಿಗೆಯಲ್ಲಿ ಕಳುಹಿಸಿ ಎಂದು ಹೇಳಲು ಆಗುತ್ತದೆಯೇ?" ಎಂದರು.
"ಈ ರಾಜ್ಯಕ್ಕೆ ಮೆಟ್ರೋ ತಂದವರು ನಾವು. ಅವರಿಗೆ ಅಧಿಕಾರ ಇದ್ದಾಗ ಏನು ಮಾಡಿದ್ದಾರೆ? ಕೇಂದ್ರದಿಂದ ಏನು ತೆಗೆದುಕೊಂಡು ಬಂದಿದ್ದಾರೆ? ಬೆಂಗಳೂರಲ್ಲಿ ಎಷ್ಟು ಪಿಲ್ಲರ್ ಹಾಕಿದ್ದಾರೆ? ಯೋಜನೆಗೆ ಹಣವೆಷ್ಟು ತಂದಿದ್ದಾರೆ? ಕೇಂದ್ರ ಸರಕಾರ ಮೆಟ್ರೋ ಯೋಜನೆಗೆ ಶೇ. 11-12 ರಷ್ಟು ಹಣ ನೀಡುತ್ತಿದೆ. ಭೂ ಪರಿಹಾರ ಸೇರಿದಂತೆ ಎಲ್ಲವನ್ನೂ ನಾವೇ ನೀಡುತ್ತಿದ್ದೇವೆ" ಎಂದರು.
"ಅವನ ಬಗ್ಗೆ ನನ್ನ ಬಳಿ ಯಾವ ಪ್ರಶ್ನೆಯನ್ನೂ ಕೇಳಬೇಡಿ. ಹೋಲಿಕೆ ಮಾಡಬೇಡಿ. ಹೀ ಇಸ್ ಎ ವೇಸ್ಟ್ ಮೆಟಿರಿಯಲ್, ಖಾಲಿ ಟ್ರಂಕ್ ಆತ. ಅವರ ಪಕ್ಷದ ಹಿರಿಯ ನಾಯಕರಾದ ಅಶೋಕ್, ಅಶ್ವತ್ಥ ನಾರಾಯಣ್, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅಂತಹವರು ಮಾತನಾಡಿದರೆ ಉತ್ತರ ನೀಡೋಣ. ಏಕೆಂದರೆ ಅವರಿಗೆ ಇದೆಲ್ಲವೂ ಅರ್ಥವಾಗುತ್ತದೆ. ಬೆಂಗಳೂರಿನಲ್ಲಿ ಬಿಆರ್ ಟಿಎಸ್ ಮಾಡಲು ಎಲ್ಲಿ ಜಾಗವಿದೆ? ಭೂ ಪರಿಹಾರ ಎಷ್ಟಾಗುತ್ತದೆ ಎನ್ನುವ ಅರಿವು ತೇಜಸ್ವಿ ಸೂರ್ಯನಿಗೆ ತಲೆಯಲ್ಲಿಯೇ ಇಲ್ಲ" ಎಂದರು.







