ಮುಡಾ ಪ್ರಕರಣ: 100 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು ಹಾಕಿದ ಈಡಿ
ʼಈವರೆಗೆ ಒಟ್ಟು 400 ಕೋಟಿ ರೂ.ಗಳಷ್ಟು ಮುಡಾ ಆಸ್ತಿ ಜಪ್ತಿ’

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಹಕಾರಿ ಸಂಘ, ಮುಡಾ ಅಧಿಕಾರಿಗಳು ಸೇರಿದಂತೆ ಪ್ರಭಾವಿಗಳ ಹೆಸರಿನಲ್ಲಿ ನೋಂದಣಿಯಾಗಿದ್ದ ಸುಮಾರು 100 ಕೋಟಿ ರೂ ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ(ಈ.ಡಿ.) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ-2002ರ ನಿಬಂಧನೆಗಳಡಿ ಮುಡಾದ ನಿವೇಶನಗಳು ಸೇರಿದಂತೆ 92 ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಈ.ಡಿ. ತಿಳಿಸಿದೆ.
ಅನರ್ಹ ಫಲಾನುಭವಿಗಳನ್ನು ಗುರುತಿಸಿ, ಸರಕಾರಿ ಆದೇಶಗಳನ್ನು ನೇರವಾಗಿ ಉಲ್ಲಂಘಿಸಿ ನಕಲಿ/ಅಪೂರ್ಣ ದಾಖಲೆಗಳನ್ನು ಬಳಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಕೆಲವು ಸಂದರ್ಭಗಳಲ್ಲಿ ಹಿಂದಿನ ದಿನಾಂಕಗಳನ್ನು ನಮೂದಿಸಿ ಹಂಚಿಕೆ ಪತ್ರಗಳನ್ನು ನೀಡಲಾಗಿದೆ. ಮತ್ತು ಈ ಅಕ್ರಮ ಹಂಚಿಕೆಗಳಿಗೆ ಪ್ರತಿಯಾಗಿ ಸಹಕಾರಿ ಸಂಘ ಮತ್ತು ಹಂಚಿಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅಧಿಕಾರಿಗಳ ಸಂಬಂಧಿಕರು/ಸಹವರ್ತಿಗಳ ಬ್ಯಾಂಕ್ ಖಾತೆಗಳಿಗೆ ಹಣ ರವಾನಿಸಲಾಗಿದೆ ಎಂದು ಈ.ಡಿ. ಪ್ರಕಟನೆಯಲ್ಲಿ ಉಲ್ಲೇಖಿಸಿದೆ.
ವಿವಿಧ ಕಾನೂನುಗಳು, ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮೋಸದ ವಿಧಾನಗಳ ಮೂಲಕ ಮುಡಾ ನಿವೇಶನಗಳ ಹಂಚಿಕೆಯಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿರುವುದನ್ನು ಈ.ಡಿ. ತನಿಖೆ ಬಹಿರಂಗಪಡಿಸಿದೆ. ಪರಿಹಾರದ ನಿವೇಶನಗಳನ್ನು ಅರ್ಹರಲ್ಲದ ವ್ಯಕ್ತಿ, ಸಂಸ್ಥೆಗಳಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವುದರಲ್ಲಿ ಮುಡಾದ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಸೇರಿದಂತೆ ಇತರರು ಪ್ರಮುಖ ಪಾತ್ರವಹಿಸಿದ್ದಾರೆ. ಪ್ರತಿಯಾಗಿ ಲಂಚ ಪಡೆದಿದ್ದಕ್ಕೆ ಸಂಬಂಧಿಸಿದ ಪುರಾವೆಗಳು, ನಗದು, ಬ್ಯಾಂಕ್ ವರ್ಗಾವಣೆ, ಚರ/ಸ್ಥಿರ ಆಸ್ತಿಗಳ ರೂಪದಲ್ಲಿ ಅಕ್ರಮವಾಗಿ ಹಂಚಿಕೆ ಮಾಡಿದ್ದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಂಗ್ರಹಿಸಲಾಗಿದೆ ಎಂದು ಈ.ಡಿ. ತಿಳಿಸಿದೆ.
ಈ ಹಿಂದೆ ಸುಮಾರು 300 ಕೋಟಿ ರೂ. ಮೌಲ್ಯದ 160 ಮುಡಾ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು, ಈ 92 ಸ್ಥಿರಾಸ್ತಿಗಳ ಬಳಿಕ ಒಟ್ಟು ಸುಮಾರು 400 ಕೋಟಿ ರೂ.ಗಳಷ್ಟು ಮುಟ್ಟುಗೋಲು ಹಾಕಿಕೊಂಡಂತಾಗಿದೆ ಎಂದು ಈ.ಡಿ. ಪ್ರಕಟನೆಯಲ್ಲಿ ಮಾಹಿತಿ ನೀಡಿದೆ.
ಲೋಕಾಯುಕ್ತರ ವಿರುದ್ಧದ ದೂರು ಪರಿಶೀಲಿಸಿ ಕ್ರಮ: ಕೇಂದ್ರ ಜಾಗೃತ ಆಯೋಗ
ಮುಡಾ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಆರೋಪ ಪ್ರಕರಣ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಸುಳ್ಳು ತನಿಖಾ ವರದಿ ನೀಡಿರುವುದಾಗಿ ಆರೋಪಿಸಿ ಕೇಂದ್ರ ಜಾಗೃತ ಆಯೋಗಕ್ಕೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ನೀಡಿದ್ದ ದೂರನ್ನು ಸ್ವೀಕರಿಸಲಾಗಿದ್ದು, ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದಾಗಿ ಎಂದು ಆಯೋಗ ತಿಳಿಸಿದೆ.
ಮುಡಾ ಹಗರಣ ಸಂಬಂಧ ಲೋಕಾಯುಕ್ತ ಎಡಿಜಿಪಿ ಮನೀಶ್ ಕರ್ಬೀಕರ್, ಐಜಿಪಿ ಸುಬ್ರಮಣ್ಯೇಶ್ವರಾವ್ ಹಾಗೂ ತನಿಖಾಧಿಕಾರಿಯಾಗಿರುವ ಎಸ್ಪಿ ಟಿ.ಜೆ. ಉದೇಶ್ ವಿರುದ್ಧ ಕರ್ತವ್ಯ ಲೋಪವೆಸಗಿದ್ದಾರೆಂದು ಆರೋಪಿಸಿ ಮಾರ್ಚ್ 12ರಂದು ಸ್ನೇಹಮಯಿ ಕೃಷ್ಣ ಅವರು ದೂರು ನೀಡಿದ್ದರು.