ಮುಡಾ ಹಗರಣ ಪ್ರಕರಣ : ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ 9 ದಿನ ಈ.ಡಿ. ವಶಕ್ಕೆ

ಜಿ.ಟಿ.ದಿನೇಶ್ ಕುಮಾರ್
ಬೆಂಗಳೂರು, ಸೆ.17: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 9 ದಿನಗಳ ಕಾಲ ಜಾರಿ ನಿರ್ದೇಶನಾಲಯ(ಈ.ಡಿ.) ಅಧಿಕಾರಿಗಳ ವಶಕ್ಕೆ ನೀಡಿ ಬುಧವಾರ ಆದೇಶ ಪ್ರಕಟಿಸಿದೆ.
ಮಂಗಳವಾರ(ಸೆ.16) ಬೆಂಗಳೂರಿನ ಶಾಂತಿನಗರದಲ್ಲಿರುವ ಈ.ಡಿ. ಕಚೇರಿಗೆ ವಿಚಾರಣೆಗೆ ಆಗಮಿಸಿದ್ದ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಈ.ಡಿ. ಬಂಧಿಸಿತ್ತು. ತಡರಾತ್ರಿಯೇ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಿ 1 ದಿನ ವಶಕ್ಕೆ ಪಡೆದುಕೊಂಡಿದ್ದ ಈ.ಡಿ. ಸೆ.17ರ ಬುಧವಾರ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಮತ್ತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತು.
ವಿಚಾರಣೆ ವೇಳೆ ಜಿ.ಟಿ.ದಿನೇಶ್ ಕುಮಾರ್ ಪರ ವಕೀಲರು, ಒಂದು ವರ್ಷದಿಂದ ಸುಮ್ಮನಿದ್ದ ಈ.ಡಿ. ಅಧಿಕಾರಿಗಳು ಈಗ ತನಿಖೆಗೆ ದಿನೇಶ್ ಬೇಕು ಎನ್ನುತ್ತಿದ್ದಾರೆ. ಇಷ್ಟು ದಿನ ಬಂಧನ ಮಾಡದೇ ಇದ್ದವರನ್ನು ಈಗ ಬಂಧಿಸಿದ್ದೇಕೆ? ಈಗಾಗಲೇ ಬ್ಯಾಂಕ್ ವಿವರಗಳನ್ನು ಎಲ್ಲವನ್ನೂ ನೀಡಿದ್ದು ಈಗ ಮತ್ತೆ ವಶಕ್ಕೆ ಕೇಳುವುದು ಸರಿಯಲ್ಲ. ಜಿ.ಟಿ.ದಿನೇಶ್ ಕುಮಾರ್ಗೆ ಕೆಲವು ಆರೋಗ್ಯ ಸಮಸ್ಯೆ ಇರುವುದರಿಂದ ಮಧ್ಯಂತರ ಜಾಮೀನು ನೀಡಬೇಕು ಎಂದು ವಾದಿಸಿದರು.
ಇದಕ್ಕೆ ಪ್ರತಿಯಾಗಿ ವಾದ ನಡೆಸಿದ ಈ.ಡಿ. ಪರ ವಕೀಲರು, ನಮಗೆ ತನಿಖೆಗೆ ಬೇಕಾದ ಅಗತ್ಯ ದಾಖಲೆಗಳು ಸಿಕ್ಕಿದ್ದು 14 ದಿನ ವಶಕ್ಕೆ ನೀಡುವಂತೆ ನ್ಯಾಯಾಧೀಶರನ್ನು ಮನವಿ ಮಾಡಿದರು.
ಎರಡು ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಸೆಪ್ಟೆಂಬರ್ 26ರಂದು ಸಂಜೆ 5 ಗಂಟೆಗೆ ಜಿ.ಟಿ.ದಿನೇಶ್ಕುಮಾರ್ ಅವರನ್ನು ಹಾಜರುಪಡಿಸಬೇಕು ಎಂದು ಈ.ಡಿ.ಗೆ ಸೂಚಿಸಿ ಆದೇಶ ಹೊರಡಿಸಿತು.
ಪ್ರಕರಣದ ಹಿನ್ನೆಲೆ: ಜಿ.ಟಿ.ದಿನೇಶ್ ಕುಮಾರ್ ಅವರು 2022ರಲ್ಲಿ ಮುಡಾ ಆಯುಕ್ತರಾಗಿದ್ದರು. ಇವರ ಅವಧಿಯಲ್ಲಿ 50:50ರ ಅನುಪಾತದಲ್ಲಿ ನೂರಾರು ಕೋಟಿ ರೂ. ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಹಂಚಿದ ಆರೋಪ ಕೇಳಿ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಕೋಟ್ಯಂತರ ರೂ. ಮೌಲ್ಯದ 14 ಬದಲಿ ನಿವೇಶನ ಕೊಡಿಸುವಲ್ಲಿ ಪ್ರಭಾವ ಬೀರಿರುವ ಆರೋಪ ಕೇಳಿ ಬಂದಿತ್ತು.
ಈ ಸಂಬಂಧ ಅಕ್ರಮ ಹಣ ವರ್ಗಾಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಈ.ಡಿ. ಅಧಿಕಾರಿಗಳು, 2024ರ ಅ.28ರಂದು ಜಿ.ಟಿ.ದಿನೇಶ್ ಕುಮಾರ್ ಅವರ ಬಾಣಸವಾಡಿಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿ ಶೋಧಿಸಿದ್ದರು. ಆ ಬಳಿಕ ವಿಚಾರಣೆಗೆ ಹಾಜರಾಗುವಂತೆ ಈ.ಡಿ. ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದರು. ನೋಟಿಸ್ ಹಿನ್ನೆಲೆಯಲ್ಲಿ ನ.9ರಂದು ಈಡಿ ಅಧಿಕಾರಿಗಳ ಎದುರು ಹಾಜರಾಗಿದ್ದ ದಿನೇಶ್ ಕುಮಾರ್ ವಿಚಾರಣೆ ಎದುರಿಸಿದ್ದರು.







