ಸಿನಿಮಾ ಟಿಕೆಟ್ ಮೇಲೆ ಶೇ.2 ಸೆಸ್ ಪ್ರಶ್ನಿಸಿ ಮಲ್ಟಿಪ್ಲೆಕ್ಸ್ಗಳಿಂದ ಅರ್ಜಿ; ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಸಾಂದರ್ಭಿಕ ಚಿತ್ರ | PC : magnific.com
ಬೆಂಗಳೂರು : ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಅನುದಾನ ಒದಗಿಸಲು ಚಿತ್ರಮಂದಿರ, ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ಟಿಕೆಟ್ ದರದ ಮೇಲೆ ಶೇ. 2 ಸೆಸ್ ವಿಧಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಮಿಕರ ಸಾಮಾಜಿಕ ಭದ್ರತಾ (ಕಲ್ಯಾಣ) ಕಾಯ್ದೆ-2024ರಡಿ 2026ರ ಸೆಪ್ಟೆಂಬರ್ 1ರಿಂದ ಕಡ್ಡಾಯವಾಗಿ ಟಿಕೆಟ್ ದರದ ಮೇಲೆ ಶೇ.2 ಸೆಸ್ ಸಂಗ್ರಹಿಸಬೇಕು ಎಂದು ರಾಜ್ಯ ಸರಕಾರದ ಪರವಾಗಿ ಕಾರ್ಮಿಕ ಆಯುಕ್ತರು 2026ರ ಆಗಸ್ಟ್ 29ರಂದು ಹೊರಡಿಸಿರುವ ಸುತ್ತೋಲೆ ರದ್ದುಪಡಿಸುವಂತೆ ಕೋರಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಪಿವಿಆರ್ ಐನಾಕ್ಸ್ ಲಿಮಿಟೆಡ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ಸಂಬಂಧ ರಾಜ್ಯ ಸರಕಾರ, ಕಾರ್ಮಿಕ ಇಲಾಖೆ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿಯಲ್ಲಿ ಆಕ್ಷೇಪಿಸಲಾದ ವಿಷಯದ ಬಗ್ಗೆ ವಿವರಣೆ ನೀಡುವಂತೆ ಸರಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಗುರುವಾರಕ್ಕೆ (ಸೆಪ್ಟೆಂಬರ್ 10) ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿ, ಕಾಯ್ದೆಯ ಸೆಕ್ಷನ್ 1(2)ರ ಪ್ರಕಾರ ಸರಕಾರವು ಈ ಕಾಯ್ದೆ ಯಾವಾಗ ಜಾರಿಗೆ ಬರಲಿದೆ ಎಂದು ಪ್ರತ್ಯೇಕ ಅಧಿಕೃತ ಅಧಿಸೂಚನೆ ಹೊರಡಿಸಬೇಕು. ಆದರೆ, ಸರಕಾರ ಇನ್ನೂ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ಹೀಗಿದ್ದರೂ, ಕಾಯ್ದೆ ಜಾರಿಯಲ್ಲಿದೆ ಎಂದು ನೋಟಿಸ್ ಕಳುಹಿಸಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮೊದಲು ಕಾಯ್ದೆ ಜಾರಿಗೆ ಬರಲಿ, ಆ ನಂತರ ಅದರ ನಿಯಮಗಳ ವ್ಯಾಖ್ಯಾನ ಮಾಡೋಣ. ಜಾರಿಯಲ್ಲೇ ಇಲ್ಲದ ಕಾಯ್ದೆ ಅಡಿ ಹಣ ಪಾವತಿಸಲು ನೋಟಿಸ್ ನೀಡಲು ಹೇಗೆ ಸಾಧ್ಯ? ಎಂದು ಮೌಖಿಕವಾಗಿ ಪ್ರಶ್ನಿಸಿತಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.






