ಜೆಡಿಎಸ್ ಕಾರ್ಯಕರ್ತರಿಗೂ ನನ್ನ ಮನೆಯ ಬಾಗಿಲು ತೆರೆದಿರುತ್ತದೆ: ಸಿಎಂ ಡಿ.ಕೆ.ಶಿವಕುಮಾರ್

Photo source: X/@DKShivakumar
ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರಿಗಷ್ಟೇ ಮಾತ್ರವಲ್ಲ, ಜೆಡಿಎಸ್ನ ಕಾರ್ಯಕರ್ತರಿಗೂ ನನ್ನ ಮನೆಯ ಬಾಗಿಲು ಸದಾ ತೆರೆದಿರುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರವಿವಾರ ಇಲ್ಲಿನ ಕನಕಪುರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ವಿವಿಧೆಡೆ ಆಯೋಜಿಸಿದ್ದ ಕೃತಜ್ಞತಾ ಸಮರ್ಪಣಾ ಯಾತ್ರೆಯಲ್ಲಿ ಭಾಗವಾಗಿ ಹಾರೋಹಳ್ಳಿಯಲ್ಲಿ ಮಾತನಾಡಿದ ಅವರು, ಹಿಂದೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಕಾರಣಕ್ಕಾಗಿ ಅನಿತಾ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಅವರಿಗೆ ನಾವು ಬೆಂಬಲ ನೀಡಿದ್ದೆವು. ಅನಂತರ ಏನಾಯಿತು ಎಂದು ಚರ್ಚೆ ಮಾಡಲು ಬಯಸುವುದಿಲ್ಲ ಎಂದರು.
ಆದರೆ, ಡಿ.ಕೆ.ಶಿವಕುಮಾರ್ ಕಾಂಗ್ರೆಸ್ಗೆ ಮಾತ್ರ ಅಲ್ಲ, ಜೆಡಿಎಸ್ ಕಾರ್ಯಕರ್ತರಿಗೂ ನನ್ನ ಸಹಕಾರ ಇದೆ. ನನ್ನ ಮನೆಯ ಬಾಗಿಲು ಜೆಡಿಎಸ್ ಕಾರ್ಯಕರ್ತರಿಗಾಗಿಯೂ ತೆರೆದಿರುತ್ತದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಜನರ ಋಣ ತೀರಿಸುವ ಕೆಲಸ ಮಾಡಬೇಕು. ನಾನು ಮುಖ್ಯಮಂತ್ರಿಯಾಗಿದ್ದರೂ ನಿಮ್ಮ ಮನೆಯ ಮಗ ಹಾಗೂ ತಾಲೂಕಿನ ಸೇವಕ ಎಂದು ಅವರು ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ನಾಮಕರಣ ಮಾಡಿದ್ದರಿಂದ ಜಮೀನಿನ ಬೆಲೆ ಏನಾಗಿದೆ ಎಂದು ಎಲ್ಲರಿಗೂ ಅರಿವಾಗಿದೆ. ನಾನು ಹೊಸದಾಗಿ ಏನನ್ನೂ ಮಾಡಿಲ್ಲ. ನಾವೆಲ್ಲಾ ಬೆಂಗಳೂರಿಗೆ ಸೇರಿದವರು. ಮೂಲವನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ ಎಂದ ಅವರು, ಮೊದಲು ಇದು ಬೆಂಗಳೂರು ನಗರ ಜಿಲ್ಲೆಯಾಗಿತ್ತು. ನಾನು ಬೆಂಗಳೂರು ಜಿಲ್ಲಾ ಸದಸ್ಯನಾಗಿದ್ದೆ. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಯಿತು. ರಾಮನಗರ ಜಿಲ್ಲೆ ಎಂದು ಹೆಸರಿಸಲಾಗಿತ್ತು. ಈಗ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿದೆ. ಈ ಭಾಗದ ಅಭಿವೃದ್ಧಿಗೆ ಏನೆಲ್ಲಾ ಕೆಲಸಗಳಾಗಬೇಕೆಂಬ ಬಗ್ಗೆ ಪ್ರತ್ಯೇಕ ಸಭೆ ನಡೆಸಿ, ಚರ್ಚಿಸಲಾಗುವುದು. ಜನರ ಸಮಸ್ಯೆ ಆಲಿಸಲು ವಿಶೇಷ ಅಧಿಕಾರಿಯನ್ನು ನಿಯೋಜಿಸಲಾಗುವುದು ಎಂದು ಪ್ರಕಟಿಸಿದರು.
ನಾನು ಮುಖ್ಯಮಂತ್ರಿಯಾಗುವ ಕುರಿತಂತೆ ಗಳಿಗೆ, ಮುಹೂರ್ತ ಇಡಬೇಡ ಎಂದು ಹಲವು ಬಾರಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ಗೆ ಹೇಳಿದ್ದೆ, ಮಾತು ಕಡಿಮೆ ಮಾಡು ಎಂದು ಎಷ್ಟು ಹೇಳಿದರೂ ಕೇಳಲಿಲ್ಲ. ಹೊಡೆಯುವುದೂ ಒಂದು ಬಿಟ್ಟು ಮಿಕ್ಕಿದೆಲ್ಲಾ ಮಾಡಿದ್ದೇನೆ. ಬಾಯಿ ಚಪಲ, ಆಸೆ, ಅಭಿಮಾನದಿಂದ ಮಾತನಾಡಿದ್ದಾರೆ. ನೋಟೀಸ್ ನೀಡಲಾಗಿತ್ತು ಎಂದು ಅವರು ಹೇಳಿದರು.






