ಬೆಂಗಳೂರು- ಮೈಸೂರು ಮೂಲಸೌಕರ್ಯ ಯೋಜನೆ | ಸುಪ್ರೀಂಕೋರ್ಟ್ ರಿಟ್ ಅರ್ಜಿಯಲ್ಲಿ ನನ್ನ ಹೆಸರಿದೆ: ಎಚ್.ಡಿ. ದೇವೇಗೌಡ

ಬೆಂಗಳೂರು: ಬೆಂಗಳೂರು- ಮೈಸೂರು ಮೂಲಸೌಕರ್ಯ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ನನ್ನ ಹೆಸರನ್ನು ಇದರಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.
ಬುಧವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಕೆಲವು ರೈತರು ಹಾಗೂ ನನ್ನನ್ನು ಉಲ್ಲೇಖ (ಪಾರ್ಟಿ) ಮಾಡಿದೆ. ನಾನು ಈ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದರು. ಬಿಎಂಐಸಿ ಯೋಜನೆಗೆ ಹಣಕಾಸು ಇಲಾಖೆಯ ಸಹಮತಿಯೂ ಇತ್ತು. ಆಗ ಯೋಜನೆಗೆ ಒಪ್ಪಂದ (ಎಂಓಯು) ಮಾಡಿಕೊಳ್ಳಲಾಗಿತ್ತು. ಆ ಒಪ್ಪಂದದ ಎಲ್ಲಾ ಮಾಹಿತಿಯೂ ಅವರಿಗೆ ಕೂಡ ಇದೆ ಎಂದು ತಿಳಿಸಿದರು.
ಈ ಯೋಜನೆಯು ಬೆಂಗಳೂರು ನಗರ, ಮಂಡ್ಯ, ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿತ್ತು. ಐದು ಟೌನ್‍ಶಿಪ್ ಗಳು, ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಒಪ್ಪಂದವಾಗಿತ್ತು. ಈ ಇಳಿವಯಸ್ಸಿನಲ್ಲೂ ನಾನು ವಕೀಲರಿಗೆ ಶುಲ್ಕ ಕೊಟ್ಟು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗಿದೆ. ನೈಸ್ ಕಂಪೆನಿ ವಿಚಾರದಲ್ಲಿ ಕಾನೂನು ಸಲಹೆಗಾರರಿಗೆ 55 ಲಕ್ಷ ರೂಪಾಯಿ ಕೊಡುತ್ತಿದ್ದಾರಂತೆ. ರಾಜ್ಯ ಸರಕಾರದ ಅಡ್ವೋಕೇಟ್ ಜನರಲ್, ಕಾನೂನು ಸಲಹೆಗಾರರು ಇದ್ದರೂ ಸಹ ಇನ್ನೊಬ್ಬರನ್ನು ನೈಸ್ ಕಂಪೆನಿಗೆ ಸಂಬಂಧಿಸಿದಂತೆ ಕಾನೂನು ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ನನಗೆ ಇನ್ನೂ ಹೋರಾಟದ ಕೆಚ್ಚಿದೆ. ಹೋರಾಟ ಮಾಡುವ ಶಕ್ತಿ ಇದೆ. ಒಂದು ಲಕ್ಷಕ್ಕೂ ಹೆಚ್ಚು ನೌಕರರು ಹೊರಗುತ್ತಿಗೆ ಮೂಲಕ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಹುದ್ದೆಗಳು ಭರ್ತಿಯಾಗದೇ ಹಾಗೆಯೇ ಖಾಲಿ ಉಳಿದಿವೆ. ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದರೆ ಎಷ್ಟು ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ದೇವೇಗೌಡರು ದೂರಿದರು.







