ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧದ ಕಾನೂನು ಹೋರಾಟಕ್ಕೆ ನನ್ನ ಬೆಂಬಲ : ವೈ ಎಸ್ ವಿ ದತ್ತಾ
“ಪ್ರಭಾಕರ ಭಟ್ಟರ ಶಾಲೆಗೆ ಕುಮಾರಸ್ವಾಮಿ ಭೇಟಿ ವೈಯುಕ್ತಿಕ”

ಬೆಂಗಳೂರು : ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ, ಕಾನೂನು ಹೋರಾಟ ಮಾಡುತ್ತಿರುವ ನಜ್ಮಾ ಅವರಿಗೆ ನನ್ನ ನೈತಿಕ ಬೆಂಬಲವಿದೆ ಎಂದು ಜೆಡಿಎಸ್ ನಾಯಕ ವೈ ಎಸ್ ವಿ ದತ್ತಾ ಹೇಳಿದ್ದಾರೆ.
ವಾರ್ತಾಭಾರತಿಯೊಂದಿಗೆ ಮಾತನಾಡಿದ ಮಾಜಿ ಶಾಸಕ ದತ್ತಾ ಅವರು, “ಯಾವುದೇ ಧರ್ಮವು ಹೆಣ್ಣು ಮಕ್ಕಳನ್ನು ಗೌರವಿಸುವಂತೆ ಹೇಳುತ್ತದೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವ ಭಟ್, ಎಲ್ಲಾ ಧರ್ಮದ ಹೆಣ್ಣುಮಕ್ಕಳನ್ನು ಅಕ್ಕ ತಂಗಿಯರಂತೆ ಕಾಣಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಮುಸ್ಲಿಂ ಹೆಣ್ಣು ಮಕ್ಕಳಿಗೆ ಅವಹೇಳನ ಮಾಡುವುದೂ ಒಂದೇ, ನಮ್ಮ ಹೆಣ್ಣು ಮಕ್ಕಳಿಗೆ ಅವಹೇಳನ ಮಾಡುವುದೂ ಒಂದೇ ಎಂಬುದು ನನ್ನ ಭಾವನೆ. ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸುವ ನಜ್ಮಾ ಎಲ್ಲಾ ಹೆಣ್ಣುಮಕ್ಕಳ ಪರವಾಗಿ ದನಿಯೆತ್ತಿದ್ದಾರೆ. ಆಕೆಯನ್ನು ನಾನು ಅಭಿನಂದಿಸುತ್ತೇನೆ” ಎಂದು ವೈ ಎಸ್ ವಿ ದತ್ತಾ ಶ್ಲಾಘಿಸಿದ್ದಾರೆ.
“ರಾಜ್ಯ ಸರಕಾರ ಈ ವಿಚಾರದಲ್ಲಿ ಸ್ವಲ್ಪ ಧೈರ್ಯ ತೋರಬೇಕು. ಹೈಕೋರ್ಟ್ನಲ್ಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ತುರ್ತಾಗಿ ಕಾನೂನು ಕ್ರಮ ತೆಗೆದುಕೊಳ್ಳಲು, ಸರಕಾರ ತನ್ನ ಅಡ್ವೊಕೇಟ್ ಜನರಲ್ ಗೆ ಸೂಚನೆ ನೀಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಕುಮಾರಸ್ವಾಮಿ ಭೇಟಿ ವೈಯುಕ್ತಿಕ :
ಕಲ್ಲಡ್ಕ ಪ್ರಭಾಕರ ಭಟ್ ಅವರು ಕಲ್ಲಡ್ಕದಲ್ಲಿ ನಡೆಸುತ್ತಿರುವ ಶ್ರೀರಾಮ ವಿದ್ಯಾಲಯದ ವಾರ್ಷಿಕ ಕ್ರೀಡಾಕೂಟಕ್ಕೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಭಾಕರ ಭಟ್ಟರನ್ನು ಹೊಗಳಿದ್ದರು. ಈ ಬಗ್ಗೆ ದತ್ತಾ ಅವರನ್ನು ಪ್ರಶ್ನಿಸಿದಾಗ, ಬೇರೆಯವರ ವೈಯುಕ್ತಿಕ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನ ಹೇಳಿಕೆಗಳು ವೈಯುಕ್ತಿಕ ಎಂದರು.







