‘ನನ್ನ ತೆರಿಗೆ ನನ್ನ ಹಕ್ಕು’ ಅಭಿಯಾನ ಎಕ್ಸ್ ಜಾಲತಾಣದಲ್ಲಿ ಟ್ರೆಂಡಿಂಗ್
ದಕ್ಷಿಣ ಭಾರತದ ಹಣ ಉತ್ತರಕ್ಕೆ ಹೋಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೈಗೊಂಡಿರುವ ‘ನನ್ನ ತೆರಿಗೆ ನನ್ನ ಹಕ್ಕು’ ಅಭಿಯಾನ ʼಎಕ್ಸ್ʼ ನಲ್ಲಿ ಟ್ರೆಂಡಿಂಗ್ ಆಗಿದೆ. ‘ಕೇಂದ್ರ ಸರಕಾರದ ಭಾಷಾ ಸವಾರಿ, ಸಾಂಸ್ಕೃತಿಕ ಸವಾರಿ, ರಾಜಕೀಯ ಸವಾರಿ, ಆರ್ಥಿಕ ಸವಾರಿಯನ್ನು ಸಹಿಸಿಕೊಳ್ಳಲು ಕನ್ನಡಿಗರು ಕತ್ತೆಗಳಲ್ಲ, ಸಿಡಿದೇಳುವ ಸಿಂಹಗಳು’ ಎಂದು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ರವಿವಾರ ‘ನನ್ನ ತೆರಿಗೆ ನನ್ನ ಹಕ್ಕು’ ಅಭಿಯಾನಕ್ಕೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಕನ್ನಡಿಗರು ನಡೆಸುತ್ತಿರುವ ‘ನನ್ನ ತೆರಿಗೆ ನನ್ನ ಹಕ್ಕು’ ಎಕ್ಸ್ ಅಭಿಯಾನಕ್ಕೆ ನನ್ನ ಪೂರ್ಣ ಬೆಂಬಲವಿದೆ. ಕನ್ನಡಿಗರು ಬೆವರು ಸುರಿಸಿ ಕಟ್ಟುವ ತೆರಿಗೆ ನಮ್ಮವರ ಕಷ್ಟಕಾಲಕ್ಕೆ ಉಪಯೋಗಕ್ಕೆ ಬರದೆ ಉತ್ತರದ ರಾಜ್ಯಗಳ ಪಾಲಾಗುತ್ತಿದೆ’ ಎಂದು ಹೇಳಿದ್ದರು.
‘ಈ ಬಾರಿಯ ಬಜೆಟ್‍ನಲ್ಲಿ ಕೇಂದ್ರ ಸರಕಾರ ವಿದೇಶಗಳಿಗೆ ಘೋಷಿಸಿದ ಅನುದಾನ. ಬೂತಾನ್- 2398.97 ಕೋಟಿ ರೂ., ಮಾಲ್ಡೀವ್ಸ್-770.90 ಕೋಟಿ ರೂ., ನೇಪಾಳ-2650ಕೋಟಿ ರೂ., ಮ್ಯಾನ್ಮಾರ್ -2370 ಕೋಟಿ ರೂ., ಮಾರಿಷಸ್-2330 ಕೋಟಿ ರೂ., ಆಪಘಾನಿಸ್ತಾನ-2220 ಕೋಟಿ ರೂ., ಬಾಂಗ್ಲಾದೇಶ-130 ಕೋಟಿ ರೂ., ಶ್ರೀಲಂಕಾ-60 ಕೋಟಿ ರೂ., ಸೆಲಿಚೆಲ್ಲೆಸ್-29.91 ಕೋಟಿ ರೂ. ಹಾಗೂ ಮಂಗೋಲಿಯಾ-5ಕೋಟಿ ರೂ. ಆದರೆ, ವಾರ್ಷಿಕ 4ಲಕ್ಷ ಕೋಟಿ ರೂ. ಸಂಪನ್ಮೂಲ ಸಂಗ್ರಹಿಸಿ ಕೊಡುವ ಕರ್ನಾಟಕಕ್ಕೆ ಕೇಂದ್ರ ಸರಕಾರ ಕೊಟ್ಟಿರುವ ಅನುದಾನ-0(ಶೂನ್ಯ). ಕನ್ನಡಿಗರ ಬೆವರಿನ ಹಣವನ್ನು ಲಪಟಾಯಿಸಿ ವಿದೇಶಗಳಿಗೆ ಹರಿಸುತ್ತಿರುವುದನ್ನು ಪ್ರಶ್ನಿಸದೆ ಸುಮ್ಮನಿರಲು ಕನ್ನಡಿಗರು ಗುಲಾಮರಲ್ಲ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು.







