ಮೈಸೂರು| ಒಂದೇ ಕುಟುಂಬದ ನಾಲ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ; ಆತ್ಮಹತ್ಯೆ ಶಂಕೆ

ಸಾಂದರ್ಭಿಕ ಚಿತ್ರ
ಮೈಸೂರು: ತಮ್ಮ ಮನೆಯಲ್ಲೇ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮೈಸೂರು ನಗರದ ಚಾಮುಂಡಿಪುರಂ ನಲ್ಲಿ ನಡೆದಿದೆ.
ಮೈಸೂರು ತಾಲ್ಲೂಕು ಬರಡನಪುರ ಗ್ರಾಮದ ಮಹದೇವಸ್ವಾಮಿ (48), ಇವರ ಪತ್ನಿ ಹುಣಸೂರಿನ ಅನಿತಾ (35), ಪುತ್ರಿಯರಾದ ಚಂದ್ರಕಲಾ (17) ಹಾಗೂ ಮಹಾಲಕ್ಷ್ಮಿ (15) ಎಂಬವರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾಲಭಾದೆಯಿಂದಲೇ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಹಿತಿ ಕಲೆಹಾಕುತ್ತಿದ್ದಾರೆ.
ಮಹದೇವಸ್ವಾಮಿ ಅವರ ಮೃತದೇಹ ಮನೆಯ ಹಾಲ್ನಲ್ಲಿ ಪತ್ತೆಯಾದರೆ, ಪತ್ನಿ ಅನಿತಾ ಮೃತದೇಹ ಕುರ್ಚಿಯ ಮೇಲೆ, ದೊಡ್ಡ ಮಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮತ್ತು ಚಿಕ್ಕಮಗಳ ಮೃತದೇಹ ಕೊಠಡಿಯಲ್ಲಿ ಪತ್ತೆಯಾಗಿದೆ. ಮಹದೇವಸ್ವಾಮಿ ಅವರು ಆರ್.ಎಂ.ಸಿ ಮಾರುಕಟ್ಟೆಯಲ್ಲಿ ಕಮೀಷನ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರಿಂದ ಸಾಲಭಾದೆಗೆ ಸಿಲುಕಿದ್ದರು ಎಂದು ಹೇಳಲಾಗುತ್ತಿದೆ.
ನಾಲ್ಕು ಶವಗಳು ಮನೆಯ ನಾಲ್ಕು ಕಡೆಗಳಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಬಹುಶಃ ಒಂದೆರೆಡು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಡಿಸಿಪಿಗಳಾದ ಮುತ್ತುರಾಜ್ ಹಾಗೂ ಜಾಹ್ನವಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







