ಮುಂದಿನ ಚುನಾವಣೆಯಲ್ಲಿ ನಾಗೇಂದ್ರ ವಿರುದ್ಧ ಸ್ಪರ್ಧೆ : ಬಿ.ಶ್ರೀರಾಮುಲು

ನಾಗೇಂದ್ರ/ ಬಿ.ಶ್ರೀರಾಮುಲು
ಬೆಂಗಳೂರು : ಮುಂದಿನ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಎಂದು ನಾಗೇಂದ್ರ ಸವಾಲು ಹಾಕಿದ್ದಾರೆ. ಇನ್ನೂ ಕೆಲವೆ ತಿಂಗಳಲ್ಲಿ ಚುನಾವಣೆ ಬರಲಿದೆ. ಆವೇಶ ಪಡಬೇಡಿ, ನೀವು ಎಲ್ಲಿ ಸ್ಪರ್ಧಿಸುತ್ತೀರೋ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಘೋಷಿಸಿದರು.
ಶನಿವಾರ ಮಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗೇಂದ್ರ ತಪ್ಪು ಮಾಡಿರುವುದರಿಂದ ಪಶ್ಚಾತ್ತಾಪ ಕಾಡುತ್ತಿದೆ. ಆ ತಪ್ಪನ್ನು ಒಪ್ಪಿಕೊಳ್ಳಬೇಕು. ವಾಲ್ಮೀಕಿ ನಿಗಮದಲ್ಲಿನ ಹಗರಣ ಸಂಬಂಧ ನಾಗೇಂದ್ರ ಎರಡು ಬಾರಿ ರಾಜೀನಾಮೆ ನೀಡಿರುವುದು ವಿಶೇಷ ಎಂದರು.
ಹಗರಣ ನಡೆದಿರುವುದನ್ನು ಹಿಂದಿನ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದರು 87 ಕೋಟಿ ಹಣ ವರ್ಗಾವಣೆ ಆಗಿದ್ದು ಬಯಲಿಗೆ ಬಂದಿತ್ತು. ಲೋಕಸಭಾ ಚುನಾವಣೆಯಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಬಿಜೆಪಿ ಸೋಲಿಸಲು ವಾಲ್ಮೀಕಿ ನಿಗಮದ ಹಣ ಬಳಕೆಯಾಗಿತ್ತು ಎಂದು ಶ್ರೀರಾಮುಲು ವಿವರಿಸಿದರು.
ರಾಜೀನಾಮೆ ನೀಡುವ ವೇಳೆ ನಾಗೇಂದ್ರ ಕಣ್ಣೀರು ಹಾಕಿದರು. ಹಾಗೆ ಮಾಡಲು ಯಾರು ಹೇಳಿದ್ದರೊ ಗೊತ್ತಿಲ್ಲ. ನಿಮ್ಮ ಕಣ್ಣೀರಿಗೆ ಬಿಜೆಪಿ ಕಾರಣವಲ್ಲ. ಅದಕ್ಕೆ ಕಾಂಗ್ರೆಸ್ ಕಾರಣ. ನೀವೇ ಸಚಿವರಾಗಿದ್ದಾಗ ಭ್ರಷ್ಟಾಚಾರ ನಡೆದಿದೆ. ಬಹುಕೋಟಿ ಹಗರಣ ಆದರೆ ವಿರೋಧ ಪಕ್ಷ ಕಣ್ಣು ಮುಚ್ಚಿ ಕೂರಲು ಆಗಲ್ಲ. ನಮ್ಮ ಸ್ವಾರ್ಥಕ್ಕೆ ಹೋರಾಟ ಮಾಡಿಲ್ಲ. ಎಸ್ಟಿ ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ಹೋರಾಡಿದೆವು ಎಂದು ಅವರು ಹೇಳಿದರು.
ಸೆ.1ರಂದು ಲಿಂಗಸಗೂರಿನಿಂದ ಆರಂಭವಾಗಲಿರುವ ಬಿಜೆಪಿ ಪಾದಯಾತ್ರೆ ಸೆ.10ರಂದು ಬಳ್ಳಾರಿಯಲ್ಲಿ ಮುಕ್ತಾಯವಾಗಲಿದೆ. ಲಿಂಗಸಗೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರು ಈ ವೇಳೆ ಹಾಜರಿರಲಿದ್ದಾರೆ. ಮಸ್ಕಿ, ಸಿಂಧನೂರು, ಕಾರಟಗಿ, ಗಂಗಾವತಿ, ಕಂಪ್ಲಿ, ಸಂಡೂರು, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಮೂಲಕ ಸಾಗುವ ಪಾದಯಾತ್ರೆ ಬಳ್ಳಾರಿ ನಗರದಲ್ಲಿ ಸಮಾರೋಪಗೊಳ್ಳಲಿದೆ.
ಶ್ರೀರಾಮುಲು, ಮಾಜಿ ಸಚಿವ






