ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಆರೋಪ: ವೈದ್ಯೆ ಶರಣ್ಯಾ ವಿರುದ್ಧದ ಎಫ್ಐಆರ್ಗೆ ತಡೆ ನೀಡಲು ಹೈಕೋರ್ಟ್ ನಕಾರ

Photo credit: PTI
ಬೆಂಗಳೂರು: ನಂದಿನಿ ಹಾಲು ಹಾಗೂ ಉತ್ಪನ್ನಗಳ ಸೇವನೆಗೆ ಯೋಗ್ಯವಲ್ಲ ಎಂದು ಅಪಪ್ರಚಾರ ಮಾಡುವಂಥ ವಿಡಿಯೊ ಮಾಡಿ ಇನ್ಸ್ಟಾಗ್ರಾಂ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಆರೋಪ ಎದುರಿಸುತ್ತಿರುವ ನಗರದ ವೈದ್ಯೆ ಡಾ. ಶರಣ್ಯಾ ಪದ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ನಗರದ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ 32ನೇ ಎಸಿಜೆಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಮೂಲತಃ ಕೋಲಾರ ಜಿಲ್ಲೆಯ ಮಾಲೂರಿನ ಡಾ. ಶರಣ್ಯಾ ಪದ್ಮ ಅವರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಎಫ್ಐಆರ್ಗೆ ತಡೆ ನೀಡಲು ನಿರಾಕರಿಸಿತು. ಜತೆಗೆ, ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಕೆಎಂಎಫ್ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ನ್ಯಾಯಪೀಠ, ನೀವು ಹಾಲು ಪರೀಕ್ಷೆ ಮಾಡಿ, ದೃಢೀಕರಣ ಮಾಡಿದ್ದೀರಾ? ಆ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಿಕೊಟ್ಟಿದ್ದೀರಾ? ಇನ್ಸ್ಟಾಗ್ರಾಂ ಇರುವುದು ಇಂತಹ ಕೆಲಸ ಮಾಡುವುದಕ್ಕಾಗಿಯೇ? ಹಾಲು ಚೆನ್ನಾಗಿಲ್ಲ ಎಂದರೆ ನೀವು ಕುಡಿಯಬೇಡಿ. ನಿಮಗಿಷ್ಟವಿಲ್ಲದಿದ್ದರೆ ನೀವು ಸುವಾಸಿತ ಹಾಲನ್ನೂ ಕುಡಿಯಬೇಡಿ. ಆದರೆ, ಈ ರೀತಿ ಅಪಪ್ರಚಾರದ ಕೆಲಸ ಏಕೆ ಮಾಡುತ್ತೀರಾ? ಜನರಿಗೆ ಏಕೆ ತಪ್ಪು ಮಾಹಿತಿ ಕೊಡುತ್ತೀರಿ ಎಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.
ಪ್ರಕರಣವೇನು?
ಖಾಸಗಿ ಆಸ್ಪತ್ರೆಯೊಂದರಲ್ಲಿ ಚರ್ಮರೋಗ ತಜ್ಞೆಯಾಗಿರುವ ಶರಣ್ಯಾ ಅವರು 2026ರ ಫೆಬ್ರವರಿ 8ರಂದು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕ ನಂದಿನಿ ಹಾಲಿನ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಮಾಡಿದ್ದರು ಎಂದು ಆರೋಪಿಸಲಾಗಿದೆ. ನಂದಿನಿ ಉತ್ಪನ್ನಗಳಾದ ಕ್ರೀಮ್ಬನ್, ಸ್ಟ್ರಾಬೆರಿ ಫ್ಲೇವರ್ಡ್ ಮಿಲ್ಕ್ ಹಾಗೂ ಸ್ಪಾಶ್ ಪಾನೀಯ ಉತ್ಪನ್ನಗಳು ವಿಷಕಾರಿ ಹಾಗೂ ರಾಸಾಯನಿಕಯುಕ್ತವಾಗಿದೆ. ದೀರ್ಘಾವಧಿಯಲ್ಲಿ ಇವುಗಳ ಸೇವನೆಯಿಂದ ಭವಿಷ್ಯದಲ್ಲಿ ಕ್ಯಾನ್ಸರ್ ಬರಲಿದೆ. ಈ ಉತ್ಪನ್ನಗಳನ್ನು ಕೃತಕ ಬಣ್ಣ ಬೆರೆಸಿ ತಯಾರಿಸಿದ್ದಾರೆ. ಎಫ್ಎಸ್ಎಸ್ಎಐ ನಂದಿನಿ ಉತ್ಪನ್ನಗಳ ತಯಾರಿಕೆಗೆ ಹೇಗೆ ಅನುಮತಿ ನೀಡಿದ್ದಾರೆ ಎಂದು ವಿಡಿಯೊದಲ್ಲಿ ಪ್ರಶ್ನೆ ಎತ್ತಿದ್ದರು.
ಜತೆಗೆ, ಕೆಎಂಎಫ್ ಸರ್ಕಾರಿ ಸ್ವಾಮ್ಯದ್ದಾಗಿದ್ದು, ಉತ್ಪನ್ನಗಳ ಉತ್ಪಾದನೆ ಹಾಗೂ ಮಾರ್ಕೆಟಿಂಗ್ ಮಾಡಿ ಲಾಭ ಮಾಡುತ್ತಿರುವ ಬಗ್ಗೆ ಭ್ರಮೆಯಲ್ಲಿ ಸರ್ಕಾರವಿದೆ. ಆದ್ದರಿಂದ, ಕೆಎಂಎಫ್ ರೀತಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಬಾರದು ಎಂದು ರೀಲ್ಸ್ನಲ್ಲಿ ಹೇಳಿದ್ದರು. ಆ ವಿಡಿಯೊ ಇನ್ಸ್ಸ್ಟಾಗ್ರಾಂನಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು.
ಈ ಸಂಬಂಧ ಕೆಎಂಎಫ್ ನಿರ್ದೇಶಕಿ ಆರ್. ಪದ್ಮಾವತಿ ಅವರು, ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಶರಣ್ಯಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ದೂರು ಆಧರಿಸಿ ಪೊಲೀಸರು ಡಾ. ಶರಣ್ಯಾ ವಿರುದ್ಧ ಬಿಎನ್ಎಸ್ ಕಾಯ್ದೆ 353(1)ಬಿ (ಸುಳ್ಳು ಮಾಹಿತಿ ಹಬ್ಬಿಸುವುದು) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66ಡಿ (ಕಂಪ್ಯೂಟರ್ ಸಂಪನ್ಮೂಲ ಬಳಸಿ ಇತರರ ಸೋಗು ಹಾಕಿ ವಂಚನೆ ಎಸಗುವುದು) ಅಡಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸ್ಪಷ್ಟನೆ ನೀಡಿದ್ದ ಕೆಎಂಎಫ್:
ವಿಡಿಯೊ ವೈರಲ್ ಆಗುತ್ತಿದ್ದಂತೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಕೂಡಲೇ ಸ್ಪಷ್ಪನೆ ನೀಡಿ, ನಂದಿನಿ ಉತ್ಪನ್ನಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಗದಿಪಡಿಸಿದ ಎಲ್ಲ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ನಂದಿನಿ ಹಾಲು ಮತ್ತು ಹಾಲು ಉತ್ಪನ್ನಗಳು ಸಂಪೂರ್ಣ ಸುರಕ್ಷಿತವಾಗಿವೆ. ಸ್ವಚ್ಛ ಹಾಗೂ ಉತ್ತಮ ಗುಣಮಟ್ಟದ್ದಾಗಿದೆ. ಈವರೆಗೂ ಕೆಎಎಫ್ ಉತ್ಪನ್ನಗಳ ಬಗ್ಗೆ ಯಾವುದೇ ದೂರು ಬಂದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಕೆಎಂಎಫ್ ಉತ್ಪನ್ನಗಳಿಗೆ ಯಾವುದೇ ರಾಸಾಯನಿಕ ಬಳಸುವುದಿಲ್ಲ. ಈಗಾಗಲೇ ಡಾ. ಶರಣ್ಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೆಎಂಎಫ್ ಉತ್ಪನ್ನಗಳ ಬಗ್ಗೆ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿತ್ತು.






