"ಅವರಿಗೆ ನಾವು ಬೇಡವಾಗಿದ್ದೇವೆ" : ದೇವೇಗೌಡರ ಮೇಲೆ ಅಸಮಾಧಾನ ಹೊರ ಹಾಕಿದ ಮಾಜಿ ಸಚಿವ ನಾರಾಯಣಗೌಡ

ಬೆಂಗಳೂರು : ‘ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ ನೀಡಿದ್ದಾರೆ. ಆದರೆ, ಲೋಕಸಭಾ ಚುನಾವಣೆ ವೇಳೆ ನಮ್ಮ ಎಂಪಿಯ ಸ್ಥಾನ ಬಿಟ್ಟುಕೊಟ್ಟೆವು. ಜೆಡಿಎಸ್‍ನವರ ಗೆದ್ದು ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ಇದೀಗ ಅವರಿಗೆ ನಾವು ಬೇಡವಾಗಿದ್ದೇವೆ’ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ನಾರಾಯಣಗೌಡ ಆಕ್ಷೇಪಿಸಿದ್ದಾರೆ.
ಮಂಗಳವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದೀಗ ನಾವು, ಮತ್ತು ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಒಟ್ಟಾಗಿ ಚುನಾವಣೆ ಎದುರಿಸ್ತೇವೆ. ಕುಮಾರಸ್ವಾಮಿಗೆ ಟಿಕೆಟ್ ಕೊಟ್ಟಾಗ, ಸುಮಲತಾ ಮೇಡಂ ಮನೆಗೆ ಹೋಗಿ ಮನವೊಲಿಸಿದೆವು. ಆಗ ನಾವು ಬೇಕಿತ್ತು, ಈಗ ನಮ್ಮ ಶಕ್ತಿ ಅವರಿಗೆ ಬೇಕಿಲ್ಲ. ನಮಗೆ ಪಕ್ಷ ಕಟ್ಟುವ ಶಕ್ತಿ ಇದೆ ಎಂದು ಟೀಕಿಸಿದರು.
ದೊಡ್ಡವರು ಹೇಳಿದ ಮೇಲೆ ಅದನ್ನು ನಾವು ಪಾಲನೆ ಮಾಡಿಕೊಂಡು ಬಂದಿದ್ದೇವೆ. ಮಂಡ್ಯದಲ್ಲಿ ಬಿಜೆಪಿ ಪಕ್ಷ ಕಟ್ಟುವ ಮೂಲಕ ಭದ್ರಕೋಟೆ ಮಾಡುತ್ತೇವೆ. ಜೆಡಿಎಸ್ ವರಿಷ್ಠರು ಆಗಿರುವ ಮಾಜಿ ಪ್ರಧಾನಿ ದೇವೇಗೌಡರೇ ಹೇಳಿದ ಮೇಲೆ, ನಾವು ಅದರಂತೆ ನಡೆಯುತ್ತೇವೆ ಎಂದು ನಾರಾಯಣಗೌಡ, ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಯ ಕೂಡಿ ಬರಬೇಕು : ಸುಮಲತಾ ಅಂಬರೀಶ್
ಮುಂದಿನ ಚುನಾವಣೆ ಬಗ್ಗೆ ಹೈಕಮಾಂಡ್, ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ನಾನು ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ರಾಜ್ಯ ರಾಜಕಾರಣಕ್ಕೆ ಬರುವ ವಿಚಾರದಲ್ಲಿ ನನ್ನ ವಿರೋಧ ಇಲ್ಲ. ಸಮಯ ಕೂಡಿ ಬರಬೇಕು. ಮಂಡ್ಯ ಜಿಲ್ಲೆಯಲ್ಲಿ ಪಕ್ಷದಿಂದ ಕೈಗೊಳ್ಳುವ ಹೋರಾಟ, ಸಭೆಗಳಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.







