ಖರ್ಗೆ, ಸಿದ್ದರಾಮಯ್ಯ ಕಾಲಿಗೆ ಬಿದ್ದು ಛಲವಾದಿ ನಾರಾಯಣಸ್ವಾಮಿ ಕ್ಷಮೆ ಕೇಳಲಿ: ಪ್ರಿಯಾಂಕ್ ಖರ್ಗೆ
ಅಂಬೇಡ್ಕರ್ ಬರೆದ ಪತ್ರದ ಬಗ್ಗೆ ಸವಾಲೆಸೆದಿದ್ದ ಛಲವಾದಿ ನಾರಾಯಣ ಸ್ವಾಮಿ

ಪ್ರಿಯಾಂಕ್ ಖರ್ಗೆ
ಬೆಂಗಳೂರು: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸೋಲಿಗೆ ಸಾವರ್ಕರ್ ಕಾರಣವೆಂದು ಪತ್ರ ಬಿಡುಗಡೆಗೊಳಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಈ ಕೂಡಲೇ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಕ್ಷಮೆಯಾಚನೆ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ‘ನಮ್ಮ ಸೋಲಿಗೆ ಸಾವರ್ಕರ್ ಕಾರಣ ಎಂದು ಡಾ.ಬಿ.ಆರ್.ಅಂಬೇಡ್ಕರ್ ಬರೆದಿರುವ ಪತ್ರದ’ ನಕಲು ಪ್ರತಿಯನ್ನು ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಇಬ್ಬರೂ ಡಬಲ್ ಇಂಜಿನ್ ಸುಳ್ಳುಗಾರರೆಂದು ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಚುನಾವಣೆ ಸೋಲಿಗೆ ಸಾರ್ವಕರ್ ಕಾರಣವೆಂದು ಎಲ್ಲಿಯೂ ಪತ್ರ ಬರೆದಿಲ್ಲ. ಒಂದು ವೇಳೆ ಇದು ನಿಜವೆಂದು ಕಾಂಗ್ರೆಸ್ನವರು ಸಾಬೀತುಪಡಿಸಿದರೆ ಹಾಗೂ ಅಂಬೇಡ್ಕರ್ ಅವರನ್ನು ಸಾವರ್ಕರ್ ಸೋಲಿಸಿದ್ದು ನಿಜವೇ ಆಗಿದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆಂದು ಛಲವಾದಿ ಸವಾಲು ಹಾಕಿದ್ದರು. ಇದೀಗ ಪತ್ರವನ್ನು ತಂದು ನಾವು ಸಾಬೀತುಪಡಿಸಿದ್ದು, ಈ ಕೂಡಲೇ ಛಲವಾದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಅವರು ಒತ್ತಾಯಿಸಿದರು.
ಅಂಬೇಡ್ಕರ್ ಅವರ ದಾಖಲೆ ತೋರಿಸಿದರೆ ನನಗೆ ಮತ್ತು ಎಐಸಿಸಿ ಅಧ್ಯಕ್ಷರಿಗೆ ಒಂದು ಲಕ್ಷ, ಒಂದು ರೂಪಾಯಿ ಬಹುಮಾನ ಕೊಡುತ್ತೇನೆಂದು ಛಲವಾದಿ ಹೇಳಿದ್ದಾರೆ. ಆದರೆ, ಅವರು ನಮಗೆ ಕೊಡುವುದು ಬೇಕಾಗಿಲ್ಲ. ಬದಲಾಗಿ, ಪಂಚಾಯತ್ ರಾಜ್ ಆಯುಕ್ತರಿಗೆ ನೇರವಾಗಿ ಹಣ ನೀಡಲಿ, ನಾವು 48 ಗಂಟೆಯೊಳಗೆ ಈ ಸಂಬಂಧ ಬಿಲ್ ಕಳಿಸುತ್ತೇನೆ. ಆನಂತರ, ಆ ಹಣದಿಂದ ಅರಿವು ಕೇಂದ್ರಕ್ಕೆ ಪುಸ್ತಕ ಖರೀದಿಸುತ್ತೇವೆ ಎಂದು ತಿರುಗೇಟು ನೀಡಿದರು.
ತಮ್ಮ ಮಾತಿಗೆ ಬದ್ಧವಾಗಿದ್ದರೆ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಮೊದಲು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು. ಆನಂತರ, 24 ಗಂಟೆಯೊಳಗೆ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದ ಅವರು, ಕೇಂದ್ರ ಸರಕಾರದ ಆರ್ಕೇವ್ಸ್ನಲ್ಲಿ ಲಭ್ಯವಿರುವ ದಾಖಲೆಗಳನ್ನು ಹೆಕ್ಕಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಮಲಕಾಂತ್ ಎನ್ನುವವರಿಗೆ ಬರೆದಿರುವ ಕೈಬರಹದ ಪತ್ರವನ್ನು ಪಡೆದಿದ್ದೇವೆ. ಸಾಕ್ಷಿ ನಿಮ್ಮ ಮುಂದೆ ಇದೆ, ಕೂಡಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ ಎಂದು ಪ್ರಿಯಾಂಕ್ ಹೇಳಿದರು.
ಮಾ7ರಂದು ಮಾಕ್ ಡ್ರಿಲ್ ನಡೆಸುವ ವಿಚಾರವಾಗಿ ಪ್ರತಿಕ್ರಿಯಿಸಿ, ದೇಶದ ಸಂರಕ್ಷಣೆಗಾಗಿ ಕೇಂದ್ರ ಸರಕಾರದ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ. ಆದರೆ ಜನರ ನಿರೀಕ್ಷೆಗೆ ತಕ್ಕ ಹಾಗೆ ಮಾಡಿ. ಏನೇ ನಿರ್ಧಾರ ತೆಗೆದುಕೊಂಡರೂ ನಾವು ಸಿದ್ದರಿದ್ದೇವೆ. ಕಾಂಗ್ರೆಸ್ ನಿಲುವು ಒಂದೇ ಎಂದು ಅವರು ಉಲ್ಲೇಖಿಸಿದರು.
ಛಲವಾದಿ ಹೇಳಿದ್ದೇನು?:
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಾರ್ವಕರ್ ಚುನಾವಣೆಯಲ್ಲಿ ಸೋಲಿಸಿದ್ದರು ಎನ್ನುವುದನ್ನು ಸಾಬೀತುಪಡಿಸಿದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಜತೆಗೆ, ಅಂಬೇಡ್ಕರ್ ಬರೆದ ಪತ್ರವನ್ನೂ ತನ್ನಿ, ನಿಮ್ಮ ಬಳಿಯಿರುವ ವಿದ್ವಾಂಸರನ್ನೂ ಕರೆತನ್ನಿ. ವಿಧಾನಸೌಧದ ಭವ್ಯಮೆಟ್ಟಿಲುಗಳ ಮೇಲೆ ಚರ್ಚೆಸೋಣ. ಒಂದು ವೇಳೆ ನಿಮ್ಮ ಆರೋಪ ಸಾಬೀತುಪಡಿಸಿದರೆ 1 ಲಕ್ಷ ರೂ.ಬಹುಮಾನವನ್ನು ನನ್ನ ಸಂಬಳದಿಂದಲೇ ಕೊಡುತ್ತೇನೆ’ ಎಂದು ಸವಾಲು ಹಾಕಿದ್ದರು.
ಬಿಜೆಪಿಯವರಿಗೆ ತಾವು ಆಡಿದ ಮಾತಿಗೆ ಬದ್ಧತೆಯಿಂದ ನಡೆದುಕೊಳ್ಳುವ ಸದ್ಗುಣ ಮತ್ತು ನೈತಿಕತೆ ಇರುವುದೇ ಆದರೆ ಛಲವಾದಿ ನಾರಾಯಣಸ್ವಾಮಿಯವರು ಈ ಕೂಡಲೇ ರಾಜೀನಾಮೆ ಕೊಡಬೇಕಾಗುತ್ತದೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 6, 2025
ಮಾನ್ಯ ನಾರಾಯಣಸ್ವಾಮಿ ಅವರೇ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸುವುದರಲ್ಲಿ ಸಾವರ್ಕರ್ ಅವರ ಪಾತ್ರವಿರುವುದನ್ನು ಸಾಬೀತು ಮಾಡಿದರೆ… pic.twitter.com/PyCLWmdNhu







